ಶಿವಮೊಗ್ಗ: ರಾಹುಲ್, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಕಾಂಗ್ರೆಸ್ಸಿನ ಹೈಕಮಾಂಡೇ ಅಥವಾ ಯತೀಂದ್ರ ಸಿದ್ದರಾಮಯ್ಯ ಅವರೇ ಹೈಕಮಾಂಡ್ ಆಗಿದ್ದಾರಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಮುಖ್ಯಮಂತ್ರಿ ವಿಷಯದಲ್ಲಿ ಪೈಪೋಟಿ ಹೆಚ್ಚಾಗಿದೆ. ಸಿದ್ದರಾಮಯ್ಯ ಅವರು ಹೈಕಮಾಂಡ್ ಹೇಳಿದಂತೆ ಕೇಳುವುದಾಗಿ ಹೇಳುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿಗೆ ಬಂದಾಗ ಒಂದು ರೀತಿ ನಿಸ್ಸಹಾಯಕರಾಗಿ ಮಾತನಾಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರು ಐದು ವರ್ಷ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಎಂದಿದ್ದಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಕಾಂಗ್ರೆಸ್ಸಿನ ಹೈಕಮಾಂಡೇ ಅಥವಾ ಯತೀಂದ್ರ ಸಿದ್ದರಾಮಯ್ಯ ಅವರೇ ಹೈಕಮಾಂಡ್ ಆಗಿದ್ದಾರಾ ಎಂದು ಕೇಳಿದರು. ಇದನ್ನು ನಾವು ಮಾತ್ರವಲ್ಲ ಕಾಂಗ್ರೆಸ್ ಶಾಸಕರೇ ಕೇಳುತ್ತಿದ್ದಾರೆ. ಇವರ ಗೊಂದಲದಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದುಬಿದ್ದಿದೆ ಎಂದು ಕಿಡಿಕಾರಿದರು.
ನಾಯಕತ್ವ ಸಮಸ್ಯೆ ಪರಿಹರಿಸಿಕೊಂಡ ನಂತರವೇ ಅಧಿವೇಶನ ನಡೆಸಿ. ಆಗ ಮಾತ್ರ ರೈತರ ಸಮಸ್ಯೆ, ಎಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದೆಂದು ಹೇಳಿದ್ದೆವು . ಆಡಳಿತ ಪಕ್ಷ ಮತ್ತು ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸುವ ಮತ್ತು ಸಮಸ್ಯೆಗೆ ಸ್ಪಂದಿಸಬೇಕೆಂಬ ವ್ಯವಧಾನವೂ ಇಲ್ಲದೇ ಇರುವುದು ನಿಜವಾಗಲೂ ದುರ್ದೈವ, ಮುಖ್ಯಮಂತ್ರಿ ಕುರ್ಚಿಗೆ ಪೈಪೋಟಿ ಸಮಸ್ಯೆ ಸಧ್ಯಕ್ಕೆ ಬಗೆಹರಿಯುವುದಿಲ್ಲ. ಯಾವ ಪುರುಷಾರ್ಥಕ್ಕೆ ಅಧಿವೇಶನ ಮಾಡುತ್ತೀರಿ? ಸಾಧ್ಯವಾದರೆ ಇದನ್ನು ಮುಂದೂಡಿ ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥ ಆಗಿಲ್ಲ; ರಾಜ್ಯದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಮೆಕ್ಕೆಜೋಳ ಬೆಳೆಗಾರರು ಖರೀದಿ ಕೇಂದ್ರ ಪ್ರಾರಂಭಕ್ಕೆ ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರಕಾರ 2400 ರೂ. ಬೆಂಬಲ ಬೆಲೆ ನಿಗದಿಪಡಿಸಿದರೂ ಸೂಕ್ತ ಸಮಯದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ ಎಂದು ಆಕ್ಷೇಪಿಸಿದರು. ರೈತರು ಮೆಕ್ಕೆಜೋಳವನ್ನು 1700- 1600 ರೂಪಾಯಿಗೆ ದಲ್ಲಾಳಿಗಳಿಗೆ, ಮಧ್ಯವರ್ತಿಗಳಿಗೆ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದು ವಿವರಿಸಿದರು.
ಬೆಳೆ ಪರಿಹಾರವನ್ನು ಘೋಷಿಸಿ 3 ತಿಂಗಳಾದರೂ ಸಮರ್ಪಕವಾಗಿ ಕೊಟ್ಟಿಲ್ಲ; ಭೀಕರ ಮಳೆಯಿಂದ ರಾಜ್ಯದಲ್ಲಿ ರಸ್ತೆಗಳು ಗುಂಡಿಗಳಿಂದ ತುಂಬಿಕೊಂಡಿವೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ; ಭ್ರಷ್ಟಾಚಾರ ಮಿತಿ ಮೀರಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

