ಮೈಸೂರು,ಆ.13: ಆಡಬಂರದ ಮದುವೆ ಮಾಡಿ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಸಾಯುವುದಕ್ಕಿಂತ ಸರಳ ವಿವಾಹ ಮಾಡಿದರೆ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಗಣಾಚಾರ ವೇದಿಕೆಯ ಚೌಹಳ್ಳಿ ನಿಂಗರಾಜಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಮೈಸೂರು ತಾಲ್ಲೂಕು, ಜಯಪುರ ಹೋಬಳಿ,ಮಂಡನಹಳ್ಳಿಯ ಮಹದೇಶ್ವರ ದೇವಸ್ಥಾನದಲ್ಲಿ ಬಸವ ಭಾರತ ಪ್ರತಿಷ್ಠಾನ ಆಯೋಜಿಸಿದ್ದ ಲಿಂಗಾಯತ ಧರ್ಮ ಜಾಗೃತಿ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಲಿಂಗಾಯತ ಧರ್ಮದವರಿಗೂ ವರಮಹಾಲಕ್ಷ್ಮಿ ಹಬ್ಬಕ್ಕೂ ಯಾವ ಸಂಬಂಧವೂ ಇಲ್ಲ,ಅಷ್ಟಮಿ ನವಮಿಯೂ ಕೂಡ ಲಿಂಗಾಯತರಿಗೆ ಸಲ್ಲ ಎಂದು ಹೇಳಿದರು.
ಗೊಡ್ಡು ಸಂಪ್ರದಾಯ ದಿಂದ ಹೊರಬಂದು ಬಸವಾದಿ ಶರಣರ ಆಚರಣೆಗಳನ್ನು ಅಳವಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೂಢನಂಬಿಕೆ ಯಿಂದ ಹೊರಬಂದು ಕಾಯಕ ದಾಸೋಹ ಶಿವಯೋಗವನ್ನು ಅಳವಡಿಸಿಕೊಂಡು ಬದುಕಬೇಕು ಎಂದು ತಿಳಿಹೇಳಿದರು.
ಸಾನಿಧ್ಯ ವಹಿಸಿ ಮಾತನಾಡಿದ ನರಸಿಂಹರಾಜಪುರ ಬಸವ ಕೇಂದ್ರದ ಬಸವಯೋಗಿಪ್ರಭುಗಳು ಬಸವಾದಿ ಶರಣರು ಮಹದೇಶ್ವರರು. ಯಡಿಯೂರು ಸಿದ್ಧಲಿಂಗೇಶ್ವರರು ಗುರುಮಲ್ಲೇಶ್ವರರು ನಿಜದ ನಿಲುವನ್ನು ತೋರಿ ಮೂಢನಂಬಿಕೆಯನ್ನು ವಿರೋಧಿಸಿದ್ದರು ಎಂದು ತಿಳಿಸಿ,ಸತ್ಯ,ಧರ್ಮ, ನಿಷ್ಠೆ, ಶ್ರದ್ಧೆಯಿಂದ ಬದುಕಬೇಕೆಂದು ಹೇಳಿದರು.
ಈ ವೇಳೆ ಮಲ್ಲೇಶ್, ಮಹದೇವಪ್ಪ, ನಟರಾಜ್, ಶಿವರುದ್ರಪ್ಪ, ಮಡಹಳ್ಳಿ ಮಹೇಶ್, ಮಂಡನಹಳ್ಳಿ ಗ್ರಾಮಸ್ಥರು ಹಾಜರಿದ್ದರು.