ಬೆಂಗಳೂರು: ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ವತಿಯಿಂದ ಔಷಧಿ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಎರಡು ತಿಂಗಳ ಸಮಯವಾಗುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆಯ (PMBJP) ಯಡಿ ತಾತ್ಕಾಲಿಕವಾಗಿ ಖರೀದಿಸಲು ಆರೋಗ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, 2025-26ನೇ ಸಾಲಿನ ವಾರ್ಷಿಕ ಇಂಡೆಂಟ್(indent)ಗೆ ಸಂಬಂಧಿಸಿದಂತೆ, ಅನುಮೋದಿತ ಸರ್ಕಾರಿ ಆದೇಶ ಸ್ವೀಕೃತಗೊಂಡ ತಕ್ಷಣ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಔಷಧಿಗಳು ನಿರಂತರವಾಗಿ ಲಭ್ಯವಾಗುವಂತೆ ಹಾಗೂ ಪ್ರಸ್ತುತ ಕಂಡುಬಂದಿರುವ ಕೊರತೆಗಳನ್ನು ನಿವಾರಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (KSMSCL) ವತಿಯಿಂದ 496 ಔಷಧಿಗಳ ಖರೀದಿ ಪ್ರಕ್ರಿಯೆಯನ್ನು ತುರ್ತು ಹಾಗೂ ಅಧ್ಯತಾ ಆಧಾರದ ಮೇಲೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಟೆಂಡರ್ ಆಹ್ವಾನಿಸಿದ 496 ಔಷಧಿಗಳಲ್ಲಿ ಈಗಾಗಲೇ 99 ಔಷಧಿಗಳಿಗೆ ಕೆಎಸ್ಎಂಎಸ್ಸಿಎಲ್ನಿಂದ ಅರ್ಹ ಬಿಡ್ದಾರರಿಗೆ Notification of Award (NOA) ನೀಡಲಾಗಿದ್ದು, ಉಳಿದ 327 ಔಷಧಿಗಳ ಖರೀದಿ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಪ್ರಸ್ತುತ ಟೆಂಡರ್ ಮೌಲ್ಯಮಾಪನ (Tender Evaluation) ಹಂತದಲ್ಲಿದ್ದು, ಈ ಟೆಂಡರ್ ಪ್ರಕ್ರಿಯೆಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಸರಬರಾಜಾಗುವ ಔಷಧಿಗಳಲ್ಲಿ ರೋಗಿಗಳ ಚಿಕಿತ್ಸೆಗೆ ಅತ್ಯಂತ ಅಗತ್ಯವಾಗಿರುವ ಸುಮಾರು 25 ಪ್ರಮುಖ Antibiotics, Analgesics and IV FLUIDS ಔಷಧಿಗಳು ಸೇರಿರುತ್ತವೆ. ಇವುಗಳು ರೋಗಿಗಳ ಚಿಕಿತ್ಸೆಗೆ ಅಗತ್ಯವಾಗಿರುವ ಮೂಲಭೂತ ಹಾಗೂ ಅವಶ್ಯಕ ಔಷಧಿಗಳಾಗಿವೆ.ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿರುವ ಅವಧಿಯಲ್ಲಿ ಯಾವುದೇ ತುರ್ತು ಅಥವಾ ಅಗತ್ಯ ಔಷಧಿಗಳ ಕೊರತೆಯಾದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆಯ (PMBJP) ಯಡಿ ಅಧಿಕೃತ ವಿತರಕರ ಮೂಲಕ ಜೆನೆರಿಕ್ ಔಷಧಿಗಳನ್ನು ಆರೋಗ್ಯ ಸಂಸ್ಥೆಗಳು ತಾತ್ಕಾಲಿಕವಾಗಿ ಖರೀದಿಸುವ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಫಾರ್ಮಾ ಮತ್ತು ಮೆಡಿಕಲ್ ಬ್ಯೂರೋ ಆಫ್ ಇಂಡಿಯಾ (PMBI) ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ವ್ಯವಸ್ಥೆಯನ್ನು ಬಲಪಡಿಸಿ ಸರ್ಕಾರಿ ಆಸ್ಪತ್ರೆಗಳಿಗೆ ನಿರಂತರ ಅವಶ್ಯಕ ಔಷಧಿಗಳ ನಿರಂತರ ಸರಬರಾಜು ಖಚಿತಪಡಿಸಲು KSMSCL ನಿಂದ ರೂ. 50 ಕೋಟಿ ನಿಧಿಯನ್ನು ಮೀಸಲಿಡಲು ತೀರ್ಮಾನಿಸಿದೆ. ಇದಲ್ಲದೆ, ಅಗತ್ಯವಿದ್ದಲ್ಲಿ ಆರೋಗ್ಯ ಸಂಸ್ಥೆಗಳು GeM ಪೋರ್ಟಲ್ ಮೂಲಕ ನೇರವಾಗಿ ಔಷಧಿಗಳನ್ನು ಖರೀದಿಸಿಕೊಳ್ಳಲು ಸಹ ಅವಕಾಶ ಕಲ್ಪಿಸಲಾಗಿದೆ. 2025 ನೇ ಸಾಲಿನಲ್ಲಿ ಅಗತ್ಯ ಔಷಧಿಗಳ ಕೊರತೆ ನೀಗಿಸಲು ಸರ್ಕಾರದಿಂದ ನೀಡಿದ 4G ವಿನಾಯಿತಿ ಆದೇಶ ಪಡೆದು ಕೆಎಸ್ಎಂಎಸ್ಸಿಎಲ್ನಿಂದ ಈಗಾಗಲೇ ಸುಮಾರು 49 ಪ್ರಮುಖ ಔಷಧಿಗಳನ್ನು ಖರೀದಿ ಮಾಡಿ ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ ಸರಬರಾಜು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

