ಮೈಸೂರು, ಮಾ.12: ಶ್ರವಣ ದೋಷ ಮುಕ್ತ ಕರ್ನಾಟಕ ಮಾಡುವುದು ನಮ್ಮ ಸರ್ಕಾರದ ಗುರಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಶ್ರವಣ ದೋಷ ಇರುವ ಮಕ್ಕಳನ್ನು ಪ್ರಾರಂಭಿಕ ಹಂತದಲ್ಲಿಯೆ ಗುರುತಿಸಿ ಶಸ್ತ್ರ ಚಿಕಿತ್ಸೆ ಹಾಗೂ ಶ್ರವಣ ಸಾಧನಗಳ ಅಳವಡಿಕೆ ಮೂಲಕ ಗುಣಪಡಿಸಿ ಶ್ರವಣ ದೋಷ ಮುಕ್ತ ರಾಜ್ಯ ಮಾಡಬೇಕು ಎಂದು ಹೇಳಿದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿಂದು ಹಮ್ಮಿಕೊಂಡಿದ್ದ ಶ್ರವಣ ಸಂಜೀವಿನಿ, ಕ್ಲಾಕಿಯರ್ ಇಂಪ್ಲಾಕ್ಟ್ ಯೋಜನೆಯ ಮರು ನಾಮಕರಣ ಹಾಗೂ ಫಲಾನುಭವಿಗಳಿಗೆ ವಾಕ್ ಮತ್ತು ಶ್ರವಣ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಿವುಡುತನಕ್ಕೆ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ಬರಿಸಬೇಕಾಗಿತ್ತು ಇದು ಬಡವರಿಗೆ ಅಸಾದ್ಯ,ಆದ್ದರಿಂದ ಸರ್ಕಾರದ ವತಿಯಿಂದ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ.
ನಾವು ಒಂದು ವರ್ಷದಲ್ಲಿ ಶ್ರವಣ ದೋಷಕ್ಕೆ 353 ಶಸ್ತ್ರ ಚಿಕಿತ್ಸೆ ಮಾಡಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ ಇದ್ದೇವೆ. ರಾಜ್ಯದಲ್ಲಿ 27 ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ವಾಕ್ ಮತ್ತು ಶ್ರವಣ ಸಂಸ್ಥೆ ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರವಣ ದೋಷ ನಿವಾರಣೆಗೆ ವಿಶೇಷ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದೆ. ಶ್ರವಣ ದೋಷ ಹೊಂದಿರುವ ಮಕ್ಕಳ ಪೋಷಕರು ಆತಂಕ ಪಡಬಾರದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ ಮಹದೇವಪ್ಪ ಮಾತನಾಡಿ ಕೆಲವು ಮಕ್ಕಳಿಗೆ ಶ್ರವಣ ದೋಷ ಹುಟ್ಟಿನಿಂದ ಬರುತ್ತದೆ. ಕೆಲವು ಮಕ್ಕಳಿಗೆ ಹಲವು ಕಾರಣಗಳಿಂದ ಬರುತ್ತದೆ. ಯಾವುದೇ ಮಕ್ಕಳು ಶ್ರವಣ ದೋಷ ಸಮಸ್ಯೆಗೆ ಒಳಗಾಗಬಾರದು. ಶ್ರವಣ ದೋಷ ಇರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿ ಕಿವಿ ಕೇಳುವ ಹಾಗೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಫಲಾನುಭವಿ ಮಕ್ಕಳಿಗೆ ಶ್ರವಣ ಸಾಧನಗಳನ್ನು ಹಾಗೂ ಕಾಕ್ಲಿಯರ್ ಇಂಪ್ಲಾಂಟ್ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್,ಕೆ ಹರೀಶ್ ಗೌಡ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದ ಡಾ. ನವೀನ್ ಭಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಡಾ ಪುಷ್ಪಲತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕುಮಾರಸ್ವಾಮಿ,ಶ್ರವಣ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಶಂಕರ್ ಮಡಿಕೇರಿ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಪುಷ್ಪವತಿ,ಮೈಸೂರು ವಿಭಾಗೀಯ ಸಹ ನಿರ್ದೇಶಕಿ ರಾಜೇಶ್ವರಿ ದೇವಿ ಮತ್ತಿತರರು ಹಾಜರಿದ್ದರು.