ಮೈಸೂರು,ಏ.20: ವಿದ್ಯಾರ್ಥಿನಿ ನೇಹಾಳ ಕೊಲೆ ಘಟನೆ ಕುರಿತು ಸಿಎಂ ಸಿದ್ದರಾಮಯ್ಯ, ಸಚಿವರಾದ ಪರಮೇಶ್ವರ್, ಎಂ.ಬಿ.ಪಾಟೀಲ್ ಹೇಳಿಕೆಯನ್ನು ಬಿಜೆಪಿ ನಗರ ಉಪಾಧ್ಯಕ್ಷೆ ಹೇಮಾ ನಂದೀಶ್ ಖಂಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ ಹಿರೇಮಠ ಅವರ ಪುತ್ರಿ ನೇಹಾಳ ಕೊಲೆ ಘಟನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಮಂತ್ರಿ ಪರಮೇಶ್ವರ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ನೀಡಿರುವ ಹೇಳಿಕೆಗಳು ಒಪ್ಪುವಂಥದ್ದಲ್ಲ, ನೈತಿಕ ಹೊಣೆ ಹೊತ್ತು ಅವರು ತಕ್ಷಣ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಗೃಹಮಂತ್ರಿ ಲವ್ ಜಿಹಾದ್, ಆಕಸ್ಮಿಕ ಘಟನೆ ಎನ್ನುತ್ತಾರೆ, ಮುಖ್ಯಮಂತ್ರಿ ಇದು ವೈಯುಕ್ತಿಕ ಕಾರಣ ಎನ್ನುತ್ತಾರೆ, ಕೈಗಾರಿಕೆ ಸಚಿವ ಅವನ ಸಮಾಜ ಪ್ರತಿನಿಧಿಸುವುದಿಲ್ಲ ಎನ್ನುತ್ತಾರೆ. ತಮ್ಮದೇ ಪಕ್ಷದ ನಾಯಕನಿಗೆ ಸಾಂತ್ವನ ಹೇಳಿ ಅವರ ಪರ ನಿಲ್ಲುವುದು ಬಿಟ್ಟು ಕೊಲೆಗಾರನ ಪರ ವಕಾಲತ್ತು ವಹಿಸುವಂತಹ ಭಾವನೆ ಬರುವ ಹೇಳಿಕೆಗಳು ರಾಜ್ಯದ ಕಾನೂನು ಸುವ್ಯವಸ್ಥೆಗೆ ಮಾರಕ ಎಂದು ಹೇಳಿದ್ದಾರೆ.
ನೇಹಾಳ ಘಟನೆ ಆಕಸ್ಮಿಕವಲ್ಲ, ಫಯಾಜ್‌ಗಿರುವ ಹೊರಗಿನ ಬೆಂಬಲದ ಬಗ್ಗೆ ಪೊಲೀಸರು ತನಿಖೆ ನಡೆಸಿ ಖಚಿತಪಡಿಸಿಕೊಳ್ಳಬೇಕು. ಫಯಾಜ್‌ಗೆ ಬದುಕುವ ಹಕ್ಕಿಲ್ಲ ಬಹಿರಂಗವಾಗಿ ಗಲ್ಲಿಗೇರಿಸಬೇಕು ಎಂದು ಹೇಮಾ
ಆಗ್ರಹಿಸಿದ್ದಾರೆ.