ಮೈಸೂರು: ಉಚಿತಗಳ ಆಮಿಷ ಒಡ್ಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರ ಏಕಾಏಕಿ ಬಸ್ ಪ್ರಯಾಣ ದರ ಏರಿಸಿ ಜನಸಾಮಾನ್ಯರ ಬದುಕಿಗೆ ಬರೆ ಎಳೆದಿದೆ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾ ನಂದೀಶ್ ಕಿಡಿಕಾರಿದ್ದಾರೆ.
ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಆಸೆ ತೋರಿಸಿ ಈಗ ಶೇ.15ರಷ್ಟು ದರ ಏರಿಸಿರುವುದು ದ್ವಂದ್ವ ನೀತಿ. ಗ್ರಾಮೀಣ ಸಾರಿಗೆ ಬಸ್‌ಗಳು ದಾರಿ ಮಧ್ಯೆಯೇ ಕೆಟ್ಟು ನಿಂತು ಪ್ರಯಾಣಿಕರು ಪರದಾಡುತ್ತಿರುವ ಈ ಸಂದರ್ಭದಲ್ಲಿ ನಿಗಮಗಳಿಗೆ ಸರಕಾರ ಹೊಸ ಬಸ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡಬೇಕಿತ್ತು,ಅದು ಬಿಟ್ಟು ಬಸ್ ದರ ಏರಿಸಿ ಬಡವರನ್ನು ಮತ್ತಷ್ಟು ಕಷ್ಟಕ್ಕೆ ನೂಕಿದೆ ಎಂದು ಟೀಕಿಸಿದ್ದಾರೆ.
ಬಸ್ ದರ ಏರಿಸುವ ನಿರ್ಧಾರವನ್ನು ರಾಜ್ಯ ಸರಕಾರ ತಕ್ಷಣ ವಾಪಸ್ ಪಡೆದು ನಿಗಮಗಳಿಗೆ ಹೊಸ ಬಸ್ ನೀಡುವ ಮೂಲಕ ಸಾರಿಗೆ ವ್ಯವಸ್ಥೆ ಸರಿಪಡಿಸಬೇಕು ಎಂದು ಹೇಮಾ ನಂದೀಶ್ ಆಗ್ರಹಿಸಿದ್ದಾರೆ.