ಬಳ್ಳಾರಿ: ರಾಜ್ಯ ಕಾಂಗ್ರೆಸ್ ನಾಯಕತ್ವದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ, ಮುಖ್ಯಮಂತ್ರಿಗಳ ಬದಲಾವಣೆ, ಸಚಿವ ಸಂಪುಟ ಪುನಾರಚನೆ ಏನೇ ಇದ್ದರೂ ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನಿಸಲಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕೃಷಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ನವೆಂಬರ್ ಕ್ರಾಂತಿ ಎಲ್ಲಾ ಬರೀ ವದಂತಿ. ಈಗಾಗಲೇ ನವೆಂಬರ್ ಶುರುವಾಗಿ ಆಗಿದೆ. ಮುಖ್ಯಮಂತ್ರಗಳ ಬದಲಾವಣೆ ವಿಚಾರ ಏನಾದರೂ ಇದ್ದರೆ ಅದು ನಮ್ಮ ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ. ಸಚಿವ ಸಂಪುಟ ಪುನಾರಚನೆ ಸೇರಿ ಏನೇ ಇದ್ದರೂ ನಮ್ಮ ಪಕ್ಷದ ವರಿಷ್ಠರು ತಿರ್ಮಾನ ಮಾಡುತ್ತಾರೆ ಎಂದರು.
ನಮ್ಮ ಕಾಂಗ್ರೆಸ್ ಪಕ್ಷ ಬಿಜೆಪಿ ಪಕ್ಷದ ರೀತಿ ಅಲ್ಲ,ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತಾ ಇದ್ದೇವೆ. ಬಿಹಾರ ಚುನಾವಣೆಯಲ್ಲಿ ನಮ್ಮ ಸಿಎಂ ಮೊದಲೇ ಪ್ರಚಾರ ಮಾಡಿ ಬಂದಿದ್ದರು. ಆ ಬಳಿಕ ಡಿಸಿಎಂ ಹೋದರು, ಅವರು ಪಕ್ಷದ ಅಧ್ಯಕ್ಷರು ಹೀಗಾಗಿ ಪದೇ ಪದೇ ದೆಹಲಿಗೆ ಹೋಗುತ್ತಾರೆ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನಮ್ಮ ಪಕ್ಷದದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ನಿನ್ನೆಯೇ ತೀರ್ಮಾನ ಆಗಿದೆ:
ನಿನ್ನೆಯೇ ರೈತರು ಪ್ರತಿಭಟನೆ ವಾಪಸು ಪಡೆದಿದ್ದಾರೆ. ಕೆಲವು ಕಡೆ ಅಷ್ಟೇ ಸ್ವಲ್ಪ ಪ್ರತಿಭಟನೆ ಇರಬಹುದು.ಸಿಎಂ ನಿನ್ನೆ ನಿರಂತರವಾಗಿ ಮಾಲಿಕರ ಹಾಗೂ ರೈತರ ಜೊತೆ ಮಾತಾಡಿದ್ದಾರೆ.3250ರೂ ಕಾರ್ಖಾನೆ ಕೊಡಬೇಕು, 50 ರೂಪಾಯಿ ಸರ್ಕಾರ ಕೊಡುತ್ತದೆ ಎಂದು ತೀರ್ಮಾನ ಆಗಿದೆ ಹಾಗಾಗಿ ಎಲ್ಲವೂ ಸರಿಯಾಗಲಿದೆ ಎಂದರು.

