ಗುವಾಹಟಿ: “ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಅವರಿಗೆ ಮುಂಬರುವ ಚುನಾವಣೆಯಲ್ಲಿ ಸೋಲುವ ಭಯ ಆವರಿಸಿದೆ. ಈ ಹತಾಶೆಯಿಂದಲೇ ಅವರು ಕಾಂಗ್ರೆಸ್ ವಿರುದ್ಧ ಆಧಾರರಹಿತ ಹಾಗೂ ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ತೀವ್ರವಾಗಿ ಕಿಡಿಕಾರಿದ್ದಾರೆ.
ಅಸ್ಸಾಂ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ವೀಕ್ಷಕರಾಗಿ ಗುವಾಹಟಿಗೆ ಆಗಮಿಸಿರುವ ಅವರು, ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಕಾಂಗ್ರೆಸ್ ವಿರುದ್ಧ ಪಾಕಿಸ್ತಾನದ ವಿಚಾರವಾಗಿ ಶರ್ಮಾ ಮಾಡುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಅಸ್ಸಾಂ ಮುಖ್ಯಮಂತ್ರಿಗಳು ರಾಜಕೀಯವಾಗಿ ಮತ್ತು ಮಾನಸಿಕವಾಗಿ ದುರ್ಬಲರಾಗಿದ್ದಾರೆ. ಅವರಿಗೆ ತಮ್ಮ ಸರ್ಕಾರದ ಸಾಧನೆಗಳ ಮೇಲೆ ವಿಶ್ವಾಸವಿಲ್ಲ. ಹೀಗಾಗಿಯೇ ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಲ್ಲಿ ಬದ್ಧತೆಯ ಕೊರತೆಯಿದೆ” ಎಂದು ಟೀಕಿಸಿದರು.
ಬದಲಾವಣೆಗೆ ಕಾಮಾಕ್ಯ ದೇವಿಗೆ ಪ್ರಾರ್ಥನೆ:
ಅಸ್ಸಾಂನ ಪ್ರಸಿದ್ಧ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಡಿ.ಕೆ.ಶಿ, “ರಾಜ್ಯದಲ್ಲಿ ಬದಲಾವಣೆಯ ಪರ್ವ ಆರಂಭವಾಗಬೇಕು. ಜನಪರ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂದು ತಾಯಿ ಕಾಮಾಕ್ಯ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ. ಈ ಬಾರಿ ಅಸ್ಸಾಂನಲ್ಲಿ ಕಾಂಗ್ರೆಸ್ ವಿಜಯಶಾಲಿಯಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೋಲಿನ ಭೀತಿಯಲ್ಲಿ ಬಿಜೆಪಿ:
ಅಸ್ಸಾಂನಲ್ಲಿ ಬಿಜೆಪಿ ಅಲೆ ಕಡಿಮೆಯಾಗುತ್ತಿದ್ದು, ಕಾಂಗ್ರೆಸ್ ಸಂಘಟನೆ ಬಲಗೊಳ್ಳುತ್ತಿರುವುದು ಆಡಳಿತ ಪಕ್ಷಕ್ಕೆ ನಡುಕ ಹುಟ್ಟಿಸಿದೆ. ಇದೇ ಕಾರಣಕ್ಕೆ ಶರ್ಮಾ ಅವರು ಹತಾಶೆಯಿಂದ ವರ್ತಿಸುತ್ತಿದ್ದಾರೆ ಎಂದು ಅವರು ಇದೇ ವೇಳೆ ವಿಶ್ಲೇಷಿಸಿದರು. ಅಸ್ಸಾಂನ ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಸಂಸದ ಗೌರವ್ ಗೊಗೊಯ್ ಅವರೊಂದಿಗೆ ಸಮಾಲೋಚನೆ ನಡೆಸಿದ ಶಿವಕುಮಾರ್, ಚುನಾವಣಾ ರಣತಂತ್ರದ ಕುರಿತು ಚರ್ಚೆ ನಡೆಸಿದರು

