Sun. Mar 8th, 2026

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಸಚಿವ ಪ್ರಿಯಾಂಕ್ ಖರ್ಗೆ

Share this with Friends

ಬೆಳಗಾವಿ: ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ ಸಿಕ್ಕಿದ್ದು,ನ್ಯಾಯಾಲಯದ ಈ ಮಹತ್ವದ ತೀರ್ಪಿನಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪದೋನ್ನತಿಯು ಸರಾಗವಾಗಿದೆ, ಅಲ್ಲದೆ ಕಾರ್ಯದರ್ಶಿ, ನೀರುಗಂಟಿ, ಬಿಲ್ ಕಲೆಕ್ಟರ್ ಗಳ ಪದೋನ್ನತಿಗೂ ಸಹಕಾರಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ತಮ್ಮನ್ನು ಅಭಿನಂದಿಸಲು ಬಂದಿದ್ದ ಪಿಡಿಒ ಪ್ರತಿನಿಧಿಗಳಿಗೊಂದಿಗೆ ಮಾತನಾಡಿದ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ಮಹತ್ವದ ಮತ್ತು ಐತಿಹಾಸಿಕ ನ್ಯಾಯ ದೊರೆತಿದೆ. ಇಚ್ಚಾಶಕ್ತಿಯ ಕೊರತೆಯಿಂದಾಗಿ ದಶಕಗಳ ಕಾಲ ಜೇಷ್ಠತಾ ಪಟ್ಟಿಯ ಪ್ರಕರಣವು ಕಗ್ಗಂಟಾಗಿ ನ್ಯಾಯಾಲಯದಲ್ಲಿತ್ತು, ನಮ್ಮ ಸರ್ಕಾರದ ಪ್ರಾಮಾಣಿಕ ಪ್ರಯತ್ನ ಮತ್ತು ವಿಶೇಷ ಆಸಕ್ತಿಯಿಂದಾಗಿ ಈ ಪ್ರಕರಣವನ್ನು ಸಕಾರಾತ್ಮಕವಾಗಿ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಪಂಚಾಯತ್ ರಾಜ್ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಾಗ ಇಲಾಖೆಯಲ್ಲಿನ ಪಿಡಿಒ ಜೇಷ್ಠತಾ ಪಟ್ಟಿಯ ಪ್ರಕರಣವು ಸವಾಲಿನಂತೆ ಎದುರಿಗಿತ್ತು, ಇದನ್ನು ಬಗೆಹರಿಸಲೇಬೇಕು ಎಂಬ ದೃಷ್ಟಿಯಿಂದ ಸುಮಾರು 15ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ, ನಿರಂತರವಾಗಿ ಪ್ರಕರಣದ ಮೇಲ್ವಿಚಾರಣೆ ನಡೆಸಲಾಗಿತ್ತು, ಕಾಲಮಿತಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ದೇಶಿಸಲಾಗಿತ್ತು. ಅಂತೆಯೇ, ನ್ಯಾಯಾಲಯದ ತೀರ್ಪು ಸಹ ಸುಮಾರು 2000 ಪಿಡಿಒಗಳಿಗೆ ನ್ಯಾಯ ಒದಗಿಸಿದೆ ಮತ್ತು ಇಲಾಖೆಯ ಆಡಳಿತಾತ್ಮಕ ವಿಷಯಗಳಿಗೆ ಪೂರಕವಾಗಿದೆ ಎಂದು ಹೇಳಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂಬ ನಮ್ಮ ಸಂಕಲ್ಪಕ್ಕೆ ಯಶಸ್ಸು ದೊರಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯದ ಈ ಮಹತ್ವದ ತೀರ್ಪಿನಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪದೋನ್ನತಿಯು ಸರಾಗವಾಗಿದೆ, ಅಲ್ಲದೆ ಕಾರ್ಯದರ್ಶಿ, ನೀರುಗಂಟಿ, ಬಿಲ್ ಕಲೆಕ್ಟರ್ ಗಳ ಪದೋನ್ನತಿಗೂ ಸಹಕಾರಿಯಾಗಲಿದೆ ಎಂದಿರುವ ಸಚಿವರು, ತಮ್ಮ ಆಶೊತ್ತರಗಳು ಈಡೇರಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ ಹೆಚ್ಚು ಬದ್ಧತೆಯ ಮೂಲಕ ಜನಸ್ನೇಹಿಯಾಗಿ ಸೇವೆ ನೀಡಬೇಕು, ಗ್ರಾಮ ಪಂಚಾಯತಿಗಳ ಆದಾಯ ಹೆಚ್ಚಿಸುವಲ್ಲಿ ನೌಕರರು ಆದ್ಯತೆ ನೀಡಬೇಕೆಂದು ಸೂಚಿಸಿದರು.


Share this with Friends

Related Post