ಬೆಂಗಳೂರು: ರಾಹುಲ್ ಗಾಂಧಿಯವರು ಮತಗಳ್ಳತನದ ಕುರಿತು ಬಿಹಾರ ರಾಜ್ಯದ ಚುನಾವಣೆ ಮುಗಿಯುವವರೆಗೂ ಅಪಪ್ರಚಾರ ಮಾಡಿದ್ದರು. ಒಂದು ರೀತಿ ಅರಾಜಕತೆ ಸೃಷ್ಟಿಸುವ ಷಡ್ಯಂತ್ರ, ಕುತಂತ್ರವನ್ನು ಕಾಂಗ್ರೆಸ್ ಪಕ್ಷ ಮಾಡಿದ್ದರೂ ಅಲ್ಲಿನ ಮತದಾರರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನಿನ್ನೆ ಬಿಹಾರ ರಾಜ್ಯದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ- ಜೆಡಿಯು ಒಳಗೊಂಡ ಎನ್ಡಿಎ ಕೂಟ ಪ್ರಚಂಡ ಜಯಭೇರಿ ಬಾರಿಸಿದೆ. ನರೇಂದ್ರ ಮೋದಿಜೀ ಅವರ ಜನಪ್ರಿಯತೆ, ಬಿಹಾರ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನೋಡಿ ಬಿಹಾರ ರಾಜ್ಯದ ಮತದಾರರು ಮತ್ತೊಮ್ಮೆ ಎನ್ಡಿಎ ಕೂಟಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.
ಚುನಾವಣಾ ಚಾಣಕ್ಯ ಅಮಿತ್ ಶಾ ಅವರ ಕಾರ್ಯತಂತ್ರ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ನೇತೃತ್ವ, ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಪ್ರಯತ್ನ, ಎರಡೂ ಪಕ್ಷಗಳ ಕಾರ್ಯಕರ್ತರ ಪರಿಶ್ರಮ- ಇದೆಲ್ಲದರ ಪರಿಣಾಮವಾಗಿ ಒಂದು ಐತಿಹಾಸಿಕ ಗೆಲುವು ದಾಖಲಾಗಿದೆ.ಕಾಂಗ್ರೆಸ್ ಪಕ್ಷದ ಅಪಪ್ರಚಾರದ ನಡುವೆಯೂ ಬಿಹಾರ ರಾಜ್ಯದಲ್ಲಿ ಎನ್ಡಿಎ ಐತಿಹಾಸಿಕ ಗೆಲುವು ದಾಖಲಿಸಿದೆ ಎಂದು ವಿವರಿಸಿದರು.
ಅಧಿಕಾರ ಕಳೆದುಕೊಂಡು ಹುಚ್ಚರಂತೆ ವರ್ತಿಸುವ ಕಾಂಗ್ರೆಸ್ಸಿಗರು:
ಒಂದು ಕಡೆ ನರೇಂದ್ರ ಮೋದಿಯವರ ಅಭಿವೃದ್ಧಿ, ವಿಕಾಸ, ಇನ್ನೊಂದು ಕಡೆ ನಿತೀಶ್ ಕುಮಾರ್ ಅವರ ಸಾಮಾಜಿಕ ನ್ಯಾಯವನ್ನು ಗಮನಿಸಿ ಬಿಹಾರದ ಜನತೆ ಮುದ್ರೆಯನ್ನು ಒತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ವಿಶ್ಲೇಷಿಸಿದ್ದಾರೆ.
ನಿತೀಶ್ ಕುಮಾರ್ ಅವರು 20 ವರ್ಷಗಳ ಆಡಳಿತದ ಮೂಲಕ ಜನಮನದಲ್ಲಿದ್ದಾರೆ ಎಂದು ನುಡಿದರು. ಇದರಿಂದ ನಾವು (ಎನ್ಡಿಎ) 202 ಸೀಟುಗಳನ್ನು ಗೆದ್ದಿದ್ದೇವೆ.ಕಾಂಗ್ರೆಸ್ಸಿನವರು ಅಧಿಕಾರ ಕಳೆದುಕೊಂಡು ಹುಚ್ಚರಂತೆ ವರ್ತಿಸುತ್ತಿದ್ದಾರೆ; ಬುದ್ಧಿ ಭ್ರಮೆ ಆಗಿದೆ. ಇಡೀ ದೇಶದಲ್ಲಿ ಜನರು ಅವರನ್ನು ತಿರಸ್ಕರಿಸುತ್ತಿದ್ದಾರೆ. ರಾಹುಲ್ ಗಾಂಧಿಯವರು ಒಬ್ಬ ಅಪಕ್ವ ರಾಜಕಾರಣಿ ಎಂದು ಟೀಕಿಸಿದರು.
ದೇಶದಲ್ಲಿ ಧರ್ಮ ಮತ್ತು ಜಾತಿಗಳನ್ನು ಒಡೆಯುವುದರ ಮೂಲಕ ಜನರಲ್ಲಿ ವಿಷಬೀಜ ಬಿತ್ತಿ ಮತಬ್ಯಾಂಕ್ ಮಾಡಿಕೊಂಡು ಕಾಂಗ್ರೆಸ್ ಆಡಳಿತ ನಡೆಸುತ್ತ ಬಂತು. ಇದೀಗ ಜನತೆ ಇಂಥ ಕಾಂಗ್ರೆಸ್ ಮತ್ತು ಅಪ್ರಬುದ್ಧ ರಾಜಕಾರಣಿಯನ್ನು ನಾಯಕನೆಂದು ಒಪುತ್ತಿಲ್ಲ. ಮತಗಳ್ಳತನ ಎಂಬುದು ಮಹಾನ್ ದೇಶದ್ರೋಹಿ ನಡವಳಿಕೆ ಎಂದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸಾಂವಿಧಾನಿಕ ಸಂಸ್ಥೆಯಾದ ಚುನಾವಣೆ ಆಯೋಗವು 79 ವರ್ಷಗಳಲ್ಲಿ ನಿಷ್ಪಕ್ಷಪಾತದಿಂದ ಚುನಾವಣೆ ನಡೆಸಿದೆ. ಇದೇ ಕಾರಣಕ್ಕೆ 60 ವರ್ಷ ಕಾಂಗ್ರೆಸ್ಸಿನವರು ಆಡಳಿತ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.

