Fri. Mar 6th, 2026

ಹುಬ್ಬಳ್ಳಿಯ ರಾಜನಗರ ಮೈದಾನದಲ್ಲಿ ಇತಿಹಾಸ: ಚೊಚ್ಚಲ ರಣಜಿ ಟ್ರೋಫಿ ಮುಡಿಗೇರಿಸಿಕೊಂಡ ಜಮ್ಮು-ಕಾಶ್ಮೀರ

Share this with Friends

ಹುಬ್ಬಳ್ಳಿ: ನಗರದ ರಾಜನಗರದಲ್ಲಿರುವ ಕೆ.ಎಸ್.ಸಿ.ಎ (KSCA) ಕ್ರೀಡಾಂಗಣವು ರಣಜಿ ಟ್ರೋಫಿ ಇತಿಹಾಸದ ಸುವರ್ಣ ಪುಟಕ್ಕೆ ಸಾಕ್ಷಿಯಾಯಿತು. ಇಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಅಮೋಘ ಜಯ ಸಾಧಿಸಿದ ಜಮ್ಮು ಮತ್ತು ಕಾಶ್ಮೀರ ತಂಡವು ಪ್ರಥಮ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಿತು.

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಮಾತನಾಡಿ, “ನಮ್ಮ ಹುಬ್ಬಳ್ಳಿಯ ಮೈದಾನದಲ್ಲಿ ರಣಜಿ ಫೈನಲ್‌ನಂತಹ ಮಹತ್ವದ ಪಂದ್ಯ ಯಶಸ್ವಿಯಾಗಿ ನಡೆದಿದ್ದು ಹೆಮ್ಮೆಯ ವಿಷಯ. ಪ್ರಥಮ ಬಾರಿಗೆ ಪ್ರಶಸ್ತಿ ಗೆದ್ದ ಜಮ್ಮು-ಕಾಶ್ಮೀರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಕರ್ನಾಟಕ ತಂಡವು ಅತ್ಯುತ್ತಮ ಹೋರಾಟ ನೀಡುವ ಮೂಲಕ ಕ್ರೀಡಾಸ್ಫೂರ್ತಿಯನ್ನು ಮೆರೆದಿದೆ. ಇಂತಹ ದೊಡ್ಡ ಮಟ್ಟದ ಪಂದ್ಯಗಳು ನಮ್ಮ ಭಾಗದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿವೆ,” ಎಂದು ಹರ್ಷ ವ್ಯಕ್ತಪಡಿಸಿದರು.

ಪಂದ್ಯದ ವಿಶೇಷ ಆಕರ್ಷಣೆಯಾಗಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಉಪಸ್ಥಿತರಿದ್ದು, ತಮ್ಮ ತಂಡದ ಐತಿಹಾಸಿಕ ಸಾಧನೆಯನ್ನು ಕಣ್ತುಂಬಿಕೊಂಡರು. ಅತ್ಯಂತ ಸುಸಜ್ಜಿತವಾಗಿ ರೂಪುಗೊಂಡಿರುವ ರಾಜನಗರ ಮೈದಾನದ ಸೌಲಭ್ಯಗಳು ಮತ್ತು ಆಯೋಜನೆಯನ್ನು ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.

ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಕ್ರೀಡಾಭಿಮಾನಿಗಳ ಸಂಭ್ರಮ, ಆಟಗಾರರ ಜಿದ್ದಾಜಿದ್ದಿನ ಪ್ರದರ್ಶನದಿಂದಾಗಿ ಹುಬ್ಬಳ್ಳಿಯಲ್ಲಿ ಕ್ರೀಡಾ ಹಬ್ಬದ ವಾತಾವರಣ ಮನೆಮಾಡಿತ್ತು. ಈ ಪಂದ್ಯವು ಉತ್ತರ ಕರ್ನಾಟಕದ ಕ್ರೀಡಾ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿ ಉಳಿಯಲಿದೆ. ಕರ್ನಾಟಕ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರೂ, ಟೂರ್ನಿಯುದ್ದಕ್ಕೂ ತೋರಿದ ಸ್ಥಿರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಪಂದ್ಯದ ಮುಖ್ಯಾಂಶಗಳು

ಐದು ದಿನಗಳ ಕಾಲ ನಡೆದ ಈ ರೋಚಕ ಪಂದ್ಯವು ಅಂತಿಮವಾಗಿ ಡ್ರಾನಲ್ಲಿ ಅಂತ್ಯಗೊಂಡರೂ, ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 291 ರನ್‌ಗಳ ಬೃಹತ್ ಮುನ್ನಡೆಯ ಆಧಾರದ ಮೇಲೆ ಜಮ್ಮು ಕಾಶ್ಮೀರ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

ಜಮ್ಮು ಕಾಶ್ಮೀರ ಪ್ರದರ್ಶನ: ಮೊದಲ ಇನಿಂಗ್ಸ್‌ನಲ್ಲಿ ಶುಭಂ ಪುಂಡೀರ್ (121) ಅವರ ಶತಕದ ನೆರವಿನಿಂದ 584 ರನ್‌ಗಳ ಶಿಖರ ನಿರ್ಮಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಕಮ್ರಾನ್ ಇಕ್ಬಾಲ್ (160)* ಮತ್ತು ಸಾಹಿಲ್ ಲೋತ್ರಾ (101)* ಅಜೇಯ ಶತಕ ಸಿಡಿಸಿ ತಂಡದ ಒಟ್ಟು ಮುನ್ನಡೆಯನ್ನು 633ಕ್ಕೆ ಏರಿಸಿದರು.

ಕರ್ನಾಟಕದ ಹೋರಾಟ: ಎಂಟು ಬಾರಿ ಚಾಂಪಿಯನ್ ಆಗಿದ್ದ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 293 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಮಯಾಂಕ್ ಅಗರ್ವಾಲ್ (160) ಏಕಾಂಗಿ ಹೋರಾಟ ನಡೆಸಿದರೂ ತಂಡಕ್ಕೆ ಆಸರೆಯಾಗಲು ಸಾಧ್ಯವಾಗಲಿಲ್ಲ.

ಬೌಲಿಂಗ್ ಮಿಂಚು: ಜಮ್ಮು ಕಾಶ್ಮೀರದ ವೇಗಿ ಆಕಿಬ್ ನಬಿ ಮೊದಲ ಇನಿಂಗ್ಸ್‌ನಲ್ಲಿ 54 ರನ್‌ ನೀಡಿ 5 ವಿಕೆಟ್ ಪಡೆಯುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು.

ಈ ಐತಿಹಾಸಿಕ ಪಂದ್ಯಕ್ಕೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ  ಉಮರ್ ಅಬ್ದುಲ್ಲಾ ಅವರು ವಿಶೇಷ ಅತಿಥಿಯಾಗಿ ಆಗಮಿಸಿ ಮಾತನಾಡಿ “ಇದು ಜಮ್ಮು ಕಾಶ್ಮೀರದ ಕ್ರೀಡಾ ಇತಿಹಾಸದಲ್ಲಿ ಒಂದು ಮೈಲಿಗಲ್ಲು” ಎಂದು ಬಣ್ಣಿಸಿದರು. ಅಲ್ಲದೆ, ವಿಜೇತ ತಂಡಕ್ಕೆ 2 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದರು.

 


Share this with Friends

Related Post