ಮೈಸೂರು, ಜೂ.19: ಲೋಕಸಭೆ, ವಿಧಾನಸಭೆ ಚುನಾವಣೆ ನಡೆಯುವಂತೆ
ಜಿಲ್ಲಾ,ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯಬೇಕು ಎಂದು ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್ ಒತ್ತಾಯಿಸಿದ್ದಾರೆ.
ನಿಗದಿತ ವೇಳೆಗೆ ಚುನಾವಣೆ ನಡೆದು
ಸ್ಥಳೀಯ ಸರಕಾರಗಳೂ ಕೂಡ ಬಲಿಷ್ಠವಾಗಿ ನಿರ್ಮಾಣವಾಗಬೇಕೆಂಬುದು
ಸಂವಿಧಾನದ ಆಶಯ. ಆದರೆ, ಇತ್ತೀಚೆಗೆ
ಸರಕಾರಗಳು ಈ ಸ್ಥಳೀಯ ಸಂಸ್ಥೆಗಳ
ಚುನಾವಣೆ ನಡೆಸಲು ನಿರ್ಲಕ್ಷ್ಯ ಮಾಡು
ತ್ತಿರುವುದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ
ಮಾಡುತ್ತಿರುವ ಅಪಮಾನ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರ ಮರು ವಿಂಗಡಣೆ, ಮೀಸಲು ಬದಲಾವಣೆ, ಪ್ರವಾಹ ಅಥವಾ ಬರ ಮತ್ತಿತರ ಕಲ್ಪಿತ ನೆಪಗಳನ್ನು ಮುಂದಿಟ್ಟುಕೊಂಡು ಈ ಚುನಾವಣೆಗಳನ್ನು ಮುಂದೂಡುತ್ರಾ ಸರಕಾರಗಳು ಹೊಣೆಗೇಡಿತನ ಪ್ರದರ್ಶನ ಮಾಡುತ್ತಿವೆ ಎಂದು ಅವರು ಟೀಕಿಸಿದ್ದಾರೆ.
ಗ್ರಾಮೀಣ ಭಾರತವೇ ನೈಜ ಭಾರತ. ಇದು ನಮ್ಮ ದೇಶದ ಪ್ರಗತಿಯ ಮೂಲ, ಗ್ರಾಮೋದ್ಧಾರಕ್ಕೆ ಇರುವ ಆಯಕಟ್ಟಿನ ಅಧಿಕಾರದ ವಲಯಗಳೇ ಈ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳು.
ಸರ್ಕಾರದ ಬೇಜವಾಬ್ದಾರಿ ಮತ್ತು ವಿಳಂಬದಿಂದ ಮೂರು ವರ್ಷದಿಂದ ಇವುಗಳು ನಿರ್ಜೀವವಾಗಿವೆ.
ಪ್ರಜಾಪ್ರಭುತ್ವದ ಮೆರುಗು ಹೆಚ್ಚಿಸುವ ಈ ಕೆಳ ಹಂತದ ಸೇವಾ ವಲಯಗಳಾದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಕೂಡಲೇ ಚುನಾವಣೆ ನಡೆಸುವ ಮೂಲಕ ಸಂವಿಧಾನದ ಮೇಲಿನ ಗೌರವವನ್ನು ಎತ್ತಿಹಿಡಿಯಬೇಕೆಂದು ಸರ್ಕಾರವನ್ನು ವಿಕ್ರಮ ಅಯ್ಯಂಗಾರ್ ಒತ್ತಾಯಿಸಿದ್ದಾರೆ.