ಬೆಂಗಳೂರು: ಮುಂಬರುವ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ನೈಋತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೆಂಗಳೂರು – ಬೀದರ್ ಹಾಗೂ ಬೆಂಗಳೂರು ಕಂಟೋನ್ಮೆಂಟ್ – ಕಲಬುರಗಿ ನಡುವಿನ ವಿಶೇಷ ರೈಲುಗಳ ಸಂಚಾರವನ್ನು ವಿಸ್ತರಿಸಲು ನಿರ್ಧರಿಸಿದೆ.
ಈ ಕುರಿತು ಮಾಹಿತಿ ನೀಡಿರುವ ನೈಋತ್ಯ ರೈಲ್ವೆ ಅಧಿಕಾರಿಗಳು ಈ ರೈಲುಗಳ ಸಮಯ, ನಿಲುಗಡೆ ಮತ್ತು ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
1. ಎಸ್ಎಂವಿಟಿ ಬೆಂಗಳೂರಿನಿಂದ ಪ್ರತಿ ಶುಕ್ರವಾರ ಮತ್ತು ಭಾನುವಾರ ಹೊರಡುವ ರೈಲು ಸಂಖ್ಯೆ 06539 ಎಸ್ಎಂವಿಟಿ ಬೆಂಗಳೂರು–ಬೀದರ್ ದ್ವಿ-ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ಈ ಮೊದಲು ಫೆಬ್ರವರಿ 27, 2026 ರವರೆಗೆ ಸಂಚರಿಸಲು ಮಾತ್ರ ನಿಗದಿಯಾಗಿತ್ತು. ಇದೀಗ ಇದರ ಸೇವೆಯನ್ನು ಮಾರ್ಚ್ 1, 2026 ರಿಂದ ಮಾರ್ಚ್ 29, 2026 ರವರೆಗೆ ವಿಸ್ತರಿಸಲಾಗಿದೆ.
2. ಬೀದರ್ ನಿಲ್ದಾಣದಿಂದ ಪ್ರತಿ ಶನಿವಾರ ಮತ್ತು ಸೋಮವಾರ ಹೊರಡುವ ರೈಲು ಸಂಖ್ಯೆ 06540 ಬೀದರ್ – ಎಸ್ಎಂವಿಟಿ ಬೆಂಗಳೂರು ದ್ವಿ-ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಈ ಮೊದಲು ಫೆಬ್ರವರಿ 28, 2026 ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಇದೀಗ ಇದರ ಸಂಚಾರವನ್ನು ಮಾರ್ಚ್ 2, 2026 ರಿಂದ ಮಾರ್ಚ್ 30, 2026 ರವರೆಗೆ ವಿಸ್ತರಿಸಲಾಗಿದೆ. ವಿಸ್ತೃತ ಅವಧಿಯಲ್ಲಿ ಈ ರೈಲುಗಳು ಪ್ರತಿ ದಿಕ್ಕಿನಲ್ಲಿ ತಲಾ 9 ಟ್ರಿಪ್ಗಳನ್ನು ಪೂರೈಸಲಿವೆ.
3. ಬೆಂಗಳೂರಿನ ಕಂಟೋನ್ಮೆಂಟ್ ನಿಲ್ದಾಣದಿಂದ ಪ್ರತಿ ಶನಿವಾರ ಹೊರಡುವ ರೈಲು ಸಂಖ್ಯೆ 06207 ಬೆಂಗಳೂರು ಕಂಟೋನ್ಮೆಂಟ್ – ಕಲಬುರಗಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ಈ ಮೊದಲು ಫೆಬ್ರವರಿ 28, 2026 ರವರೆಗೆ ಸಂಚರಿಸಲು ಮಾತ್ರ ನಿಗದಿಯಾಗಿತ್ತು. ಈ ರೈಲಿನ ಸೇವೆಯನ್ನು ಮಾರ್ಚ್ 7, 2026 ರಿಂದ ಮಾರ್ಚ್ 28, 2026 ರವರೆಗೆ ವಿಸ್ತರಿಸಲಾಗಿದೆ.
4. ಕಲಬುರಗಿಯಿಂದ ಪ್ರತಿ ಭಾನುವಾರ ಹೊರಡುವ ರೈಲು ಸಂಖ್ಯೆ 06208 ಕಲಬುರಗಿ – ಬೆಂಗಳೂರು ಕಂಟೋನ್ಮೆಂಟ್ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಈ ಮೊದಲು ಮಾರ್ಚ್ 1, 2026 ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಈ ರೈಲಿನ ಸೇವೆಯನ್ನು ಮಾರ್ಚ್ 8, 2026 ರಿಂದ ಮಾರ್ಚ್ 29, 2026 ರವರೆಗೆ ವಿಸ್ತರಿಸಲಾಗಿದೆ. ವಿಸ್ತೃತ ಅವಧಿಯಲ್ಲಿ ಈ ರೈಲುಗಳು ಪ್ರತಿ ದಿಕ್ಕಿನಲ್ಲಿ ತಲಾ 4 ಟ್ರಿಪ್ಗಳನ್ನು ನಡೆಸಲಿವೆ.
ಸಾಂತ್ರಾಗಾಚಿ – ಯಲಹಂಕ ವಿಶೇಷ ರೈಲು ವಿಸ್ತರಣೆ:
ಹೋಳಿ ಹಬ್ಬದ ಪ್ರಯುಕ್ತ ಹೆಚ್ಚುವರಿ ಪ್ರಯಾಣಿಕರ ಅನುಕೂಲಕ್ಕಾಗಿ ಆಗ್ನೇಯ ರೈಲ್ವೆಯು ಸಾಂತ್ರಾಗಾಚಿ ಮತ್ತು ಯಲಹಂಕ ನಡುವಿನ ವಿಶೇಷ ರೈಲು ಸೇವೆಯನ್ನು ಸಹ ವಿಸ್ತರಿಸಿದೆ.
1. ಸಾಂತ್ರಾಗಾಚಿಯಿಂದ ಪ್ರತಿ ಗುರುವಾರ ಹೊರಡುವ ರೈಲು ಸಂಖ್ಯೆ 02863 ಸಾಂತ್ರಾಗಾಚಿ–ಯಲಹಂಕ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ಈ ಮೊದಲು ಫೆಬ್ರವರಿ 26, 2026 ರವರೆಗೆ ಸಂಚರಿಸಲು ಮಾತ್ರ ನಿಗದಿಯಾಗಿತ್ತು. ಈಗ ಇದನ್ನು ಮಾರ್ಚ್ 5 ರಿಂದ ಮಾರ್ಚ್ 26, 2026 ರವರೆಗೆ ವಿಸ್ತರಿಸಲಾಗಿದೆ.
2. ಯಲಹಂಕದಿಂದ ಪ್ರತಿ ಶನಿವಾರ ಹೊರಡುವ ರೈಲು ಸಂಖ್ಯೆ 02864 ಯಲಹಂಕ–ಸಾಂತ್ರಾಗಾಚಿ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು ಸೇವೆಯನ್ನು ಈ ಮೊದಲು ಫೆಬ್ರವರಿ 28, 2026 ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಈಗ ಇದನ್ನು ಮಾರ್ಚ್ 7 ರಿಂದ ಮಾರ್ಚ್ 28, 2026 ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ರೈಲುಗಳು ಎರಡೂ ದಿಕ್ಕುಗಳಲ್ಲಿ ತಲಾ 4 ಟ್ರಿಪ್ಗಳನ್ನು ಪೂರೈಸಲಿವೆ.
ಸಾರ್ವಜನಿಕರು ಹಾಗೂ ಪ್ರಯಾಣಿಕರು ಈ ವಿಸ್ತೃತ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

