ಚಿತ್ರದುರ್ಗ: ನಿಯಂತ್ರಣ ತಪ್ಪಿದ ಕಂಟೈನರ್ ವಾಹನ ಹೆದ್ದಾರಿಯ ಡಿವೈಡರ್ ದಾಟಿ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಲೀಪರ್ ಕೋಚ್ ನಲ್ಲಿ ನಿದ್ರೆಯಲ್ಲಿದ್ದ ಹಲವು ಪ್ರಯಾಣಿಕರು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೆದ್ದಾರಿ 48 ರ ಗೊರ್ಲತ್ತು ಕ್ರಾಸ್ ಬಳಿ ನಡೆದಿದೆ.
ಬೆಂಗಳೂರಿನಿಂದ ಚಿತ್ರದುರ್ಗ,ಶಿವಮೊಗ್ಗ ಮಾರ್ಗವಾಗಿ ಗೋಕರ್ಣಕ್ಕೆ ತೆರಳಬೇಕಿದ್ದ ಸೀಬರ್ಡ್ ಖಾಸಗಿ ಬಸ್ ರಾತ್ರಿ 8:25ಕ್ಕೆ ಬೆಂಗಳೂರಿನ ಗಾಂಧಿನಗರದಿಂದ ಹೊರಟಿದ್ದು ಹಿರಿಯೂರು ತಾಲೂಕಿನ ಹೆದ್ದಾರಿ 48 ರ ಗೊರ್ಲತ್ತು ಕ್ರಾಸ್ ಬಳಿ ಬರುತ್ತಿದ್ದಾಗ ಮುಂಜಾನೆಗೂ ಮುನ್ನ 3.45 ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ಹಿರಿಯೂರಿನಿಂದ ಬೆಂಗಳೂರಿಗೆ ಹೊರಟಿದ್ದ ಕಂಟೈನರ್ ವಾಹನ ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ. ಡೀಸೆಲ್ ಟ್ಯಾಂಕ್ ಗೆ ಡಿಕ್ಕಿ ಹೊಡೆದಿದ್ದರಿಂದ ಬಸ್ ಏಕಾಏಕಿ ಹೊತ್ತಿ ಉರಿದಿದೆ. ಬೆಂಕಿಯ ಜ್ವಾಲೆಗೆ ಸಿಲುಕಿದ ಪ್ರಯಾಣಿಕರಲ್ಲಿ ಕೆಲವರು ಪವಾಡ ಸದೃಶ ರೀತಿಯಲ್ಲಿ ಬದುಕಿದ್ದು ಹಲವು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಸ್ಲೀಪರ್ ಕೋಚ್ ಆಗಿದ್ದ ಕಾರಣ ಬಹುತೇಕ ಪ್ರಯಾಣಿಕರು ನಿದ್ರೆಯಲ್ಲಿದ್ದು ಏನಾಗಿದೆ ಎಂದು ತಿಳಿಯುವ ಮೊದಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿದೆ ಎನ್ನಲಾಗಿದೆ. ಬಸ್ ನಲ್ಲಿ 29 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಅದರಲ್ಲಿ ಹಲವು ಜನ ಸಜೀವವಾಗಿ ದಹನಗೊಂಡಿದ್ದಾರೆ, ಸಾವನ್ನಪ್ಪಿದವರ ಸಂಖ್ಯೆ ಎಷ್ಟು ಎಂದು ಇನ್ನು ಖಚಿತವಾಗಿಲ್ಲ, ಕೆಲವರು ಕಿಟಕಿ ಗಾಜು ಹೊಡೆದು ಹೊರಬಂದು ಪ್ರಾಣ ಉಳಿಸಿಕೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಲಾರಿ ಚಾಲಕನ ನಿರ್ಲಕ್ಷ್ಯ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು ತನಿಖೆ ಬಳಿಕ ನಿಖರ ಕಾರಣ ಹೊರಬರಲಿದೆ

