ಬೆಂಗಳೂರು:ವಿಬಿ ಜಿ ರಾಮ್ ಜಿ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್ಸಿಗರು ಎಷ್ಟು ಯೋಜನೆಗಳಿಗೆ ಮಹಾತ್ಮಾ ಗಾಂಧೀಜಿ ಹೆಸರಿಟ್ಟಿದ್ದಾರೆ?454 ಯೋಜನೆ, ಸಂಸ್ಥೆಗಳಿಗೆ ನೆಹರೂ ಕುಟುಂಬದವರ ಹೆಸರನ್ನೇ ಇಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಮಾತನಾಡಿದ ಅವರು,ಇಂದಿರಾಗಾಂಧಿ ಕುಟುಂಬದವರ ಹೆಸರುಗಳನ್ನು ಹೆಚ್ಚಾಗಿ ಇರಿಸಲಾಗಿದೆ. ರಾಜೀವ್ ಗಾಂಧಿ ಗ್ರಾಮೀಣ ವಿದ್ಯುತ್ ಯೋಜನೆ, ರಾಜೀವ್ ಗಾಂಧಿ ಕುಡಿಯುವ ನೀರಿನ ಮಿಷನ್, ರಾಜೀವ್ ಗಾಂಧಿ ರಾಷ್ಟ್ರೀಯ ಶಿಶು ವಿಹಾರ, ಇಂದಿರಾ ಆವಾಸ್, ಜವಹರಲಾಲ್ ನೆಹರು ನಗರ ನವೀಕರಣ, ನೆಹರು ರೋಜ್‌ಗಾರ್, ಇಂದಿರಾಗಾಂಧಿ ಕಾಲುವೆ ಯೋಜನೆ, ರಾಜೀವ್ ಗಾಂಧಿ ಸಾಮಾಜಿಕ ಭದ್ರತೆ, ಇಂದಿರಾಗಾಂಧಿ ಪಥ ಯೋಜನೆ, ರಾಜೀವ್ ಗಾಂಧಿ ನಾಗರಹೊಳೆ ಅಭಯಾರಣ್ಯ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಜವಹರಲಾಲ್ ನೆಹರು ಆಸ್ಪತ್ರೆ, ಹೀಗೆ 454 ಯೋಜನೆ, ಸಂಸ್ಥೆಗಳಿಗೆ ಇವರ ಕುಟುಂಬದವರ ಹೆಸರನ್ನೇ ಇಡಲಾಗಿದೆ ಎಂದು ಟೀಕಿಸಿದರು.
ವಿಬಿ ಜಿ ರಾಮ್ ಜಿ ಕಾಯ್ದೆಗೆ ರಾಷ್ಟ್ರಪತಿ ಸಹಿ ಹಾಕಿ ಜಾರಿಯಾಗಿದೆ. ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದುಹಾಕಿದ್ದೇಕೆ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದಾರೆ. ರಾಮನ ಹೆಸರನ್ನು ಕಂಡರೆ ಕಾಂಗ್ರೆಸ್‌ಗೆ ಆಗಲ್ಲ. ಇದೇ ಕಾರಣಕ್ಕೆ ರಾಮನಗರ ಜಿಲ್ಲೆಯ ಹೆಸರನ್ನು ಬದಲಿಸಲಾಗಿದೆ. ರಾಮಲಿಂಗಾರೆಡ್ಡಿ ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಈಗ ಅಲ್ಲಿ ಜಿಲ್ಲೆಯೇ ಇಲ್ಲ. ಮಹಾತ್ಮ ಗಾಂಧೀಜಿಯವರು ರಘುಪತಿ ರಾಘವ ರಾಜಾರಾಮ್ ಎಂದು ಹೇಳಿದ್ದರು. ಕಾಂಗ್ರೆಸ್ ಸರ್ಕಾರ ಕೇಂದ್ರದ ವಿರುದ್ಧ 18 ನಿರ್ಣಯಗಳನ್ನು ತೆಗೆದುಕೊಂಡಿದೆ. ಹೀಗೆ ಎಲ್ಲಕ್ಕೂ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯಪಾಲರ ಭಾಷಣದ ಮೂಲಕ ಕಾಂಗ್ರೆಸ್ ಸರ್ಕಾರ ಕೇವಲ ಸುಳ್ಳುಗಳನ್ನೇ ಹೇಳಿಸಿದೆ. ಸಿಎಂ ಸಿದ್ದರಾಮಯ್ಯನವರು ಹುಲಿಯಾ ಬದಲು ಇಲಿಯಾ ಆಗಿದ್ದಾರೆ ಎಂದು ಟೀಕಿಸಿದರು.
ಮಹಾತ್ಮ ಗಾಂಧೀಜಿಯವರನ್ನು ಬಳಸಿಕೊಂಡು ಕಾಂಗ್ರೆಸ್, ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಜಾಹೀರಾತು ಓಡಾಡುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಗುತ್ತಿಗೆದಾರ ಮುನೇಗೌಡ ಎಂಬುವರು ಆತ್ಮಹತ್ಯೆ ಪ್ರಯತ್ನ ಮಾಡಿದ್ದರು ಎಂದರು.
ಕಲ್ಯಾಣ ಕರ್ನಾಟಕ ಮಂಡಳಿಯ ವತಿಯಿಂದ ಮಾಡಬೇಕಿರುವ ಕಾಮಗಾರಿಗಳನ್ನು ಇನ್ನೂ ನಡೆಸಿಲ್ಲ. ಸರ್ಕಾರದಿಂದ 5,000 ಕೋಟಿ ರೂ. ನೀಡಿದ್ದರೂ ಕಾಮಗಾರಿ ಮಾಡಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದಾರೆ. ಈ ಎಲ್ಲ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಹಿಂದಿನ ಬಿಜೆಪಿ ಬಾಕಿ ಇಟ್ಟುಕೊಂಡಿದೆ ಎಂದು ಹೇಳಿದ್ದಾರೆ. ಹಿಂದೆ 14,000 ಕೋಟಿ ರೂ. ಬಾಕಿ ಬಿಲ್ ಇರಿಸಿದ್ದಾಗ ಬಿಜೆಪಿ ಅದನ್ನು ಪಾವತಿಸಿತ್ತು. ಬಿಲ್ ಪಾವತಿಸುವುದು ನಿರಂತರ ಪ್ರಕ್ರಿಯೆ. 40 ಪರ್ಸೆಂಟ್ ಎಂಬ ಭಿತ್ತಿಪತ್ರಗಳನ್ನು ಕಾಂಗ್ರೆಸ್ ನಾಯಕರು ಎಲ್ಲ ಕಡೆ ಅಂಟಿಸಿದ್ದರು. ಈಗ ಈ ಆರೋಪದ ಪತ್ರಗಳನ್ನು ಜನರು ಕಾಂಗ್ರೆಸ್ ನಾಯಕರ ಮುಖದ ಮೇಲೆ ಅಂಟಿಸುತ್ತಾರೆ ಎಂದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿರುವಂತೆ, ಅವರು ನಿರ್ಗಮಿಸುವಾಗ 24,000 ಕೋಟಿ ರೂ. ಖಜಾನೆಯಲ್ಲಿ ಬಿಟ್ಟಿದ್ದಾರೆ. ಮೆಟ್ರೊದಲ್ಲಿ 2,000 ಕೋಟಿ ರೂ. ಹಣ ಇತ್ತು. ಆದರೆ ಕಾಂಗ್ರೆಸ್ ಬಂದ ನಂತರ ನಿರಂತರ ಭ್ರಷ್ಟಾಚಾರ ನಡೆದಿದೆ. ಮುಡಾದಲ್ಲಿ 3,000 ಕೋಟಿ ರೂ ಅಕ್ರಮ, ಅಬಕಾರಿ ಇಲಾಖೆಯಲ್ಲಿ 6,000 ಕೋಟಿ ರೂ. ಅಕ್ರಮ, ದಲಿತರ 43,000 ಕೋಟಿ ರೂ. ಅಕ್ರಮ ಬಳಕೆ, ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ. 30 ವರ್ಷಕ್ಕಾಗಿ ಮಾಡುವ ಕಾಂಕ್ರೀಟ್ ರಸ್ತೆ ಉದ್ಘಾಟನೆಗೆ ಮುನ್ನವೇ ಕಿತ್ತುಹೋಗಿದೆ ಎಂದರು.
ಅತಿ ಹೆಚ್ಚು ಸಾಲ:
ಸಿಎಂ ಸಿದ್ದರಾಮಯ್ಯ ಅತಿ ಹೆಚ್ಚು ಅಂದರೆ 7.64 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಕೆಂಗಲ್ ಹನುಮಂತಯ್ಯನವರಿಂದ ಆರಂಭವಾಗಿ ಈವರೆಗಿನ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಅತಿ ಹೆಚ್ಚು ಸಾಲ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ರೂ. ಹಣ ನೀಡುತ್ತೇವೆಂದು ಹೇಳಿ ಇನ್ನೂ ನೀಡಿಲ್ಲ. ಆರ್ಥಿಕ ಇಲಾಖೆ ಇನ್ನೂ ಹಣ ನೀಡಿಲ್ಲವೆಂದರೆ, ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಏನು ಮಾಡುತ್ತಾರೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಅನ್ನಭಾಗ್ಯದ 657 ಕೋಟಿ ರೂ. ಮೊತ್ತ ಜನರಿಗೆ ಸಿಕ್ಕಿಲ್ಲ. ಶಾಸಕರ ಪ್ರದೇಶಾಭಿವೃದ್ಧಿ ನೀಡದೆ ಶಾಸಕರು ಪರದಾಡುತ್ತಿದ್ದಾರೆ, ಅಂಗನವಾಡಿ ಸಹಾಯಕರ ಗೌರವಧನ ನೀಡದೆ ಅವರು ಪರದಾಡುತ್ತಿದ್ದಾರೆ, ನೆರೆ ಪರಿಹಾರ ನೀಡದೆ ರೈತರು ಪರದಾಡುತ್ತಿದ್ದಾರೆ. ಆದರೆ ಸಚಿವರು ಹಣ ಮಾಡುವುದರಲ್ಲಿ ಕಿತ್ತಾಟ ಮಾಡುತ್ತಿದ್ದಾರೆ. ಇದು ಇಲ್ಲಗಳ ಸರ್ಕಾರ. ಸರ್ಕಾರದ ಖಜಾನೆಯಲ್ಲಿ ಹೆಗ್ಗಣಗಳ ಕಾಟದಿಂದ ಯಾವ ಹಣವನ್ನೂ ನೀಡಲು ಆಗುತ್ತಿಲ್ಲ. ಸರ್ಕಾರದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದು, ಧಾರವಾಡದಲ್ಲಿ 10 ಸಾವಿರ ಅಭ್ಯರ್ಥಿಗಳು ಹೋರಾಟ ಮಾಡುತ್ತಿದ್ದಾರೆ ಎಂದರು.
ಕಲಾವಿದೆಗೆ ಅಪಮಾನ:
ಕಲಾವಿದೆ ಬಿ.ಜಯಶ್ರೀ 5 ಗುಂಟೆ ಭೂಮಿ ದಾನ ಮಾಡಲು ಮೂರು ಬಾರಿ ಅರ್ಜಿ ನೀಡಿದ್ದರೂ, ಕಂದಾಯ ಇಲಾಖೆ ಸ್ಪಂದಿಸಿಲ್ಲ. ಕೊನೆಗೆ ಅವರು ಸರ್ವೆ ಕಚೇರಿಗೆ ಹೋಗಿ ಕೇಳಿದಾಗ, ನಿಮ್ಮ ಕೆಲಸಕ್ಕಿಂತ ನಮ್ಮ ಮೇಲಧಿಕಾರಿಯ ಕೆಲಸ ಮುಖ್ಯ ಎನ್ನುತ್ತಾರೆ. ಅಧಿಕಾರಿ ಉಡಾಫೆಯಿಂದ ಮಾತಾಡುತ್ತಾರೆ ಎಂದು ಜಯಶ್ರೀ ಬೇಸರದಿಂದ ಹೇಳಿದ್ದಾರೆ. ದಾನ ಮಾಡುವ ಭೂಮಿಗೆ ಲಂಚ ಪಡೆಯಲು ಅವರನ್ನು ಅಲೆಸುತ್ತಿದ್ದಾರೆ. ಸರ್ಕಾರಕ್ಕೆ ಮರ್ಯಾದೆ ಇದ್ದರೆ ಆ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕಿತ್ತು. ಮನೆ ಬಾಗಿಲಿಗೆ ಸರ್ಕಾರ ಎಂದು ಪ್ರಚಾರ ಮಾಡಿದರೂ ಕಲಾವಿದೆಯನ್ನು ಕಚೇರಿಗೆ ಕರೆಸಿದ್ದಾರೆ. ಇಂತಹ ಕಳ್ಳ ಅಧಿಕಾರಿಯ ವಿರುದ್ಧ ಸಿಎಂ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

