ಬೆಂಗಳೂರು: ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ವರ್ಗಾವಣೆ ಆಗಿದೆ. ಆದರೆ, ನೆರವಾಗಿ ಭಾಗಿಯಾಗಿರುವ ಕಾನ್ಸ್ ಟೇಬಲ್ ಮೇಲೆ ಯಾವುದೇ ಕ್ರಮ ಆಗಿಲ್ಲ ಇನ್ನು ಹುಬ್ಬಳ್ಳಿ ಧಾರವಾಡ ಪೊಲಿಸ್ ಕಮಿಷನರ್ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿರುವುದು ಕ್ರಿಮಿನಲ್ ಅಪರಾಧವಾಗಿದ್ದು ಕೂಡಲೇ ಅವರನ್ನು ವರ್ಗಾವಣೆಗೊಳಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ವಿವಸ್ತ್ರ ಘಟನೆ ಹೊರ ಬಂದ ನಂತರ ಪೊಲೀಸ್ ಕಮಿಷನರ್ ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡಿದರು. ಕಾಂಗ್ರೆಸ್ ಕಾರ್ಪೊರೇಟ್ ರ ದೂರಿನ ಹಿನ್ನಲೆಯಲ್ಲಿ ಮಹಿಳೆಯ ಬಂಧನ ಮಾಡಿದ್ದಾರೆ.ಅಲ್ಲಿ ಏನಾದರೂ ಸಮಸ್ಯೆಯಾಗಿದ್ದರೆ ಬಿಎಲ್ ಒ ದೂರು ನೀಡುವ ಕೆಲಸ ಮಾಡಬೇಕಿತ್ತು ಆದರೆ ಕಾಂಗ್ರೆಸ್ ಪಕ್ಷದ ಅಣತಿಯಂತೆ ಕಾನೂನು ಬಾಹಿರವಾಗಿ ಮಹಿಳೆಯ ಬಂಧನ ನಡೆದಿದೆ. ಪೊಲೀಸ್ ಕಮಿಷನರ್ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿರುವುದು ಕ್ರಿಮಿನಲ್ ಅಪರಾಧ, ಕಮಿಷನರ್ ತನ್ನನ್ನು ತಾನು ಬಹಳ ಬುದ್ದಿವಂತ ಅಂದುಕೊಂಡಿದ್ದಾರೆ. ತಾವು ಏನು ಬೇಕಾದರು ಮಾಡಿದರೂ ನಡೆಯುತ್ತದೆ ಅಂತ ಅಂದುಕೊಂಡಿದ್ದಾರೆ. ಇವರಿಗೆ ಯಾರ ಬೆಂಬಲ ಇದೆ. ಈ ಪ್ರಕರಣದಲ್ಲಿ ಇನ್ಸ್ ಪೆಕ್ಟರ ವರ್ಗಾವಣೆ ಆಗಿದೆ. ಆದರೆ, ನೆರವಾಗಿ ಭಾಗಿಯಾಗಿರುವ ಕಾನ್ಸ್ ಟೇಬಲ್ ಮೇಲೆ ಯಾವುದೇ ಕ್ರಮ ಇಲ್ಲ. ಒಂದೆಡೆ ಆಗಿರುವ ಘಟನೆ ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಪ್ರಕರಣದಲ್ಲಿ ಭಾಗಿಯಾದವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಳ್ಳಾರಿಯಲ್ಲಿ ಘಟನೆ ನಡೆದ ತಕ್ಷಣ ಎಸ್ಪಿ ಅಮಾನತು ಮಾಡಿದ್ದಾರೆ. ಆದರೆ, ಹುಬ್ಬಳ್ಳಿ ಪ್ರಕರಣದಲ್ಲಿ ಸರ್ಕಾರ ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ಪ್ರತಿದಿನ ಒಂದೊಂದು ಪ್ರಕರಣ ನಡೆಯುತ್ತಿದೆ. ಲಂಗು ಲಗಾಮು ಇಲ್ಲದೆ ಪೊಲಿಸ್ ಇಲಾಖೆ ನಡೆಯುತ್ತಿದೆ. ಕೂಡಲೆ ಹುಬ್ಬಳ್ಳಿ ಧಾರವಾಡ ಪೊಲಿಸ್ ಕಮಿಷನರ ಅವರನ್ನು ವರ್ಗಾವಣೆ ಮಾಡಬೇಕು. ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಇದೇ ಸಾಕ್ಷಿಯಾಗಿದೆ. ದುಡ್ಡು ಕೊಟ್ಟವರ ರಕ್ಷಣೆ ಮಾಡುತ್ತಾರೆ. ಈ ಸರ್ಕಾರದಲ್ಲಿ ದ್ವಿಮುಖ ನೀತಿ ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ಅಣತಿಯಂತೆ ಪೊಲಿಸರು ನಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಒಬ್ಬ ದಲಿತ ಮಹಿಳೆಯ ವಿವಸ್ತ್ರಗೊಳಿಸಿರುವ ಪ್ರಕರಣ ಅತ್ಯಂತ ಕ್ರೂರ ಹಾಗು ಅಮಾನುಷವಾದ ಘಟನೆಯಾಗಿದೆ, ಅದೂ ಕೂಡ ಪೊಲಿಸ್ ಇಲಾಖೆಯಿಂದ ನಡೆದಿರುವುದು ಈ ರಾಜ್ಯದಲ್ಲಿ ಗೃಹ ಇಲಾಖೆ ಸಂಪೂರ್ಣ ಹಿಡಿತ ಕಳೆದುಕೊಂಡಿದೆ ಗೃಹ ಇಲಾಖೆ ಹದಗೆಟ್ಟಿದೆ ಯಾರು ರಕ್ಷಕರಿದ್ದಾರೋ ಅವರೇ ಭಕ್ಷಕರಾಗಿದ್ದಾರೆ. ಬೆಲಿಯೇ ಎದ್ದು ಹೊಲ ಮೇಯ್ದಿದೆ ಒಬ್ಬ ಮಹಿಳೆಗೆ ರಕ್ಷಣೆ ನೀಡುವ ಬದಲಿಗೆ ವಿವಸ್ತ್ರಗೊಳಿಸುವ ಕೆಲಸ ಮಾಡಿದ್ದವರು ಸಮಾಜದಲ್ಲಿ ತಲೆ ಎತ್ತಲು ನಾಲಾಯಕ್ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

