ಬೆಂಗಳೂರು: “ನಾನು ಒಡಿಶಾದ ಶಾಸಕರನ್ನು ಬೆಂಗಳೂರಿಗೆ ಕರೆಸಿಲ್ಲ, ಅವರೇ ಸ್ವಯಂಪ್ರೇರಿತರಾಗಿ ಇಲ್ಲಿಗೆ ಬಂದಿದ್ದಾರೆ. ಅವರು ನಮ್ಮ ಸಹೋದ್ಯೋಗಿಗಳು, ಅತಿಥಿಗಳಾಗಿ ಬಂದಾಗ ಗೌರವಿಸುವುದು ನಮ್ಮ ಕರ್ತವ್ಯ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಡಿಶಾ ಶಾಸಕರು ರಾಮನಗರದ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಕುರಿತು ಕೇಳಲಾದ ವಿವಿಧ ಪ್ರಶ್ನೆಗಳಿಗೆ ಸುದೀರ್ಘವಾಗಿ ಪ್ರತಿಕ್ರಿಯಿಸಿದರು.”ಒಡಿಶಾ ಪಿಸಿಸಿ ಅಧ್ಯಕ್ಷರು ನನಗೆ ಕರೆ ಮಾಡಿ ಶಾಸಕರು ಬರುತ್ತಿರುವ ಬಗ್ಗೆ ತಿಳಿಸಿದ್ದರು. ಅವರಿಗೆ ಮೈಸೂರು ನೋಡುವ ಆಸೆ ಇತ್ತು ಮತ್ತು ಸುರಕ್ಷಿತವಾದ ಜಾಗ ಬೇಕೆಂದು ಕೇಳಿದ್ದರು. ಬೆಂಗಳೂರು ಸುರಕ್ಷಿತ ತಾಣವಾಗಿರುವುದರಿಂದ ಇಲ್ಲಿಗೆ ಬರಲು ಹೇಳಿದೆ. ಅವರಿಗೆ ಅಗತ್ಯ ವ್ಯವಸ್ಥೆ ಮಾಡಿಕೊಡಲಾಗಿದೆ. ಆದರೆ ನಾನು ಇನ್ನೂ ಅವರನ್ನು ಭೇಟಿ ಮಾಡಿಲ್ಲ” ಎಂದು ಡಿ.ಕೆ.ಶಿ ವಿವರಿಸಿದರು.
ಹಳೆಯ ನೆನಪು ಹಂಚಿಕೊಂಡ ಡಿಸಿಎಂ:
ಆಪರೇಷನ್ ಕಮಲ ತಡೆಯಲು ಈ ಕಸರತ್ತು ನಡೆಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಪಕ್ಷಕ್ಕೆ ಸಂಕಷ್ಟ ಬಂದಾಗ ಜವಾಬ್ದಾರಿ ನಿಭಾಯಿಸುವುದು ಹೊಸತೇನಲ್ಲ. ವಿಲಾಸ್ ರಾವ್ ದೇಶಮುಖ್ ಅವರ ಕಾಲದಿಂದಲೂ, ಅಹ್ಮದ್ ಪಟೇಲ್ ಅವರ ರಾಜ್ಯಸಭೆ ಚುನಾವಣೆ ಹಾಗೂ ಮಧ್ಯಪ್ರದೇಶದ ಬಿಕ್ಕಟ್ಟಿನ ಸಮಯದಲ್ಲೂ ನಾನು ಇಂತಹ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ” ಎಂದರು. “ಪಕ್ಷದ ಕೆಲಸಕ್ಕೆ ನೀವೇ ಯಾವಾಗಲೂ ಮುಂದೆ ಇರುತ್ತೀರಿ, ನಿಮ್ಮ ಸಮಸ್ಯೆಗಳು ಮಾತ್ರ ಬಗೆಹರಿಯುತ್ತಿಲ್ಲವಲ್ಲ?” ಎಂಬ ಪ್ರಶ್ನೆಗೆ “ಕಾಲವೇ ಎಲ್ಲವನ್ನೂ ನಿರ್ಣಯಿಸುತ್ತದೆ” ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಸಂಪುಟ ಪುನಾರಚನೆ ಹಾಗೂ ಬಜೆಟ್ ವಿಚಾರ:
ಸಚಿವ ಸಂಪುಟ ಪುನಾರಚನೆಯ ಒತ್ತಡದ ಕುರಿತು ಮಾತನಾಡುತ್ತಾ, “ಶಾಸಕರಿಗೆ ಮಂತ್ರಿಯಾಗುವ ಆಸೆ ಇರುವುದು ಸಹಜ. ನಾನು ಮೊದಲ ಬಾರಿ ಮಂತ್ರಿಯಾದಾಗ ನನಗೂ ಆಸೆ ಇತ್ತು. ಈಗ ನಮಗೆ ವಯಸ್ಸಾಗಿದೆ, ನಾವು ಹಿರಿಯ ನಾಗರಿಕರಾಗಿದ್ದೇವೆ. ಹೊಸಬರಿಗೂ ಆಸೆ ಇರುತ್ತದೆ” ಎಂದರು.
ಇದೇ ವೇಳೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿ, “ಅವರು ಜಿಲ್ಲಾ ನ್ಯಾಯಾಲಯ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಕೇಳಿದ್ದರು. ನಾವು ಈಗಾಗಲೇ ಅವುಗಳನ್ನು ನೀಡಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡುತ್ತೇವೆ” ಎಂದು ಭರವಸೆ ನೀಡಿದರು.

