Fri. Mar 6th, 2026

ನಾನು ಬರೀ ಭಾಷಣ ಮಾಡಿಲ್ಲ, ಬಾವುಟವನ್ನೂ ಕಟ್ಟಿದ್ದೇನೆ,ಪೋಸ್ಟರ್ ಅಂಟಿಸಿದ್ದೇನೆ:ಡಿಕೆ ಶಿವಕುಮಾರ್

Share this with Friends

ಬೆಂಗಳೂರು:ನಾನು ಲೈಫ್ ಟೈಂ ಪಾರ್ಟಿ ವರ್ಕರ್,ಪಕ್ಷಕ್ಕೆ ಸಂಬಂಧಿಸಿದ ಎಲ್ಲ ಕೆಲಸವನ್ನೂ ಮಾಡಿದ್ದೇನೆ, ನಾನು ಬರೀ ವೇದಿಕೇಲಿ ಕೂತು ಭಾಷಣ ಮಾಡಿಲ್ಲ,ನಾಯಕತ್ವ ಕುರಿತು ಯಾವುದೇ ಚರ್ಚೆ ಮಾಡಲ್ಲ,ಹೈಕಮಾಂಡ್ ನಿರ್ದೇಶನದಂತೆ ಮುನ್ನಡೆಯುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಹಾಗೂ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,ನಾನು ಕೇವಲ ವೇದಿಕೆಯಲ್ಲಿ ಕುಳಿತು, ಭಾಷಣ ಮಾಡಿಕೊಂಡು ಹೋಗಿಲ್ಲ. ಐ ಹ್ಯಾವ್ ಡನ್ ಎವೆರಿ ವರ್ಕ್ ಇನ್ ದ ಪಾರ್ಟಿ, ನಾನು ಲೈಫ್ ಟೈಮ್ ಕಾರ್ಯಕರ್ತ. ನಾನು ಒಬ್ಬ ವರ್ಕರ್. ಅಧ್ಯಕ್ಷನಾದಾಗಲೂ ಪಕ್ಷದ ಬಾವುಟ ಕಟ್ಟಿದ್ದೇ‌ನೆ. ಕಾರ್ಯಕರ್ತನಾದಾಗಲೂ ಬಾವುಟ ಕಟ್ಟಿದ್ದೇನೆ, ಪೋಸ್ಟರ್ ಅಂಟಿಸಿದ್ದೇನೆ, ಕಸ ಗುಡಿಸಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಏನೇನು ಬೇಕೋ ಎಲ್ಲವನ್ನೂ ಮಾಡಿದ್ದೇನೆ ಎಂದರು.

ದೆಹಲಿಯಲ್ಲಿ ನಡೆಯುವ ಸಿಡಬ್ಲ್ಯೂಸಿ ಸಭೆಗೆ ನನ್ನನ್ನು ಕರೆದರೆ ಖಂಡಿತಾ ಹೋಗುತ್ತೇನೆ. ಆದರೆ ಇದುವರೆಗೂ ಕರೆದಿಲ್ಲ. ಸಿಎಂಗೆ ಆಹ್ವಾನ ನೀಡಿದ್ದಾರೆ. ಡೆಪ್ಯುಟಿ ಸಿಎಂಗೆ ಕರೆದಿಲ್ಲ, ಸಮಿತಿಯ ವಿಸ್ತರಿತ ಸಭೆಗೆ ಕರೆಯಬಹುದು, ಒಂದು ವೇಳೆ ಈಗಲೂ ಸಭೆಗೆ ಕರೆದರೆ ಹೋಗುತ್ತೇನೆ ಎಂದರು

ಖರ್ಗೆ ಅವರ ಜತೆ ನಾಯಕತ್ವ ವಿಚಾರವಾಗಿ ಚರ್ಚೆ ನಡೆಸಿದರಾ ಎಂದು ಕೇಳಿದಾಗ, “ಯಾವ ವಿಚಾರವಾಗಿಯೂ ಚರ್ಚೆ ನಡೆಸಿಲ್ಲ. ನಾನು ಚರ್ಚೆ ಮಾಡುವುದೂ ಇಲ್ಲ. ಮಾಡುವ ಅವಶ್ಯಕತೆಯೂ ಇಲ್ಲ.‌ ನಾನು ಮತ್ತು ಸಿದ್ದರಾಮಯ್ಯ ಅವರು ಈಗಾಗಲೇ ಇದರ ಬಗ್ಗೆ ಹೇಳಿದ್ದೇವೆ. ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ಅವರು ಏನು ಹೇಳುತ್ತಾರೋ ಆ ರೀತಿ ಕೇಳಿಕೊಂಡು ಹೋಗುತ್ತೇವೆ” ಎಂದರು.

ಸ್ಥಳೀಯ ಮಟ್ಟದಲ್ಲಿ ಗೊಂದಲ ಬಗೆಹರಿಸಿಕೊಳ್ಳಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವ ಬಗ್ಗೆ ಕೇಳಿದಾಗ, “ಹಿರಿಯರು ಮಾರ್ಗದರ್ಶನ ನೀಡುತ್ತಾರೆ” ಎಂದರು.

ಶುಕ್ರವಾರದಂದು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಿದೆ. ಈ ಸಭೆಯಲ್ಲಿ ಮನರೇಗಾ ಯೋಜನೆಯ ಹೆಸರು ಬದಲಾವಣೆ, ಅನುದಾನದಲ್ಲಿ ರಾಜ್ಯದ ಪಾಲನ್ನು ಶೇ.40ಕ್ಕೆ ಹೆಚ್ಚಿಸಿರುವುದು ಸೇರಿದಂತೆ ರೈತರಿಗೆ ಮಾರಕವಾದಂತಹ ಬದಲಾವಣೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ  ವಿಚಾರವಾಗಿ ಒಂದು ರಾಜ್ಯದ ಅಧ್ಯಕ್ಷನಾಗಿ ನನ್ನ ಅಭಿಪ್ರಾಯಗಳನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಿದ್ದೇನೆ. ಅವರ ಜತೆ ಯಾವ ರಾಜಕೀಯ ಮಾತುಕತೆಯೂ ಮಾಡಿಲ್ಲ” ಎಂದು ಸ್ಪಷ್ಟನೆ ನೀಡಿದರು.

“ಮನರೇಗಾ ಯೋಜನೆಯಿಂದ ಪಂಚಾಯತಿಗಳಿಗೆ ಅನುಕೂಲವಾಗುತ್ತಿತ್ತು. ಪಂಚಾಯತಿ ಸದಸ್ಯರುಗಳಿಗೆ ಶಕ್ತಿಯಿತ್ತು‌. ಪ್ರತಿ ಕೂಲಿ ಕಾರ್ಮಿಕರ ಖಾತೆಗೆ ಹಣ ಸಂದಾಯವಾಗಿತ್ತಿತ್ತು. ಪ್ರತಿಯೊಬ್ಬರು ಚರ್ಚೆ ನಡೆಸಿ ತಮ್ಮ ಊರಿಗೆ ಯಾವ ಕೆಲಸಗಳನ್ನು ತೆಗೆದುಕೊಳ್ಳಬೇಕು ಎನ್ನುವ ಅವಕಾಶವಿತ್ತು. ಆದರೆ ಈಗ ಕೇಂದ್ರ ಸರ್ಕಾರವೇ ಯಾವ ಜಿಲ್ಲೆಯಲ್ಲಿ ಯಾವ ಕೆಲಸ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡುತ್ತದಂತೆ” ಎಂದು ಹೇಳಿದರು.

“ರೈತರು ತಮ್ಮ ಸ್ವಂತ ಜಮೀನಿನಲ್ಲಿ ಕೆಲಸ ಮಾಡಿಕೊಳ್ಳಲು, ಇಂಗುಗುಂಡಿ ತೋಡಿಕೊಳ್ಳಲು, ಕೊಟ್ಟಿಗೆ ಕಟ್ಟಿಕೊಳ್ಳಲು – ಹೀಗೆ ಅನೇಕ ಕೆಲಸಗಳನ್ನು ಮಾಡಿಕೊಳ್ಳಲು ಅನುಕೂಲವಾಗುತ್ತಿತ್ತು. ಇಂತಹ ಅದ್ಬುತವಾದ ಕಾರ್ಯಕ್ರಮವನ್ನು ಸೋನಿಯಾಗಾಂಧಿ ಅವರ ಮಾರ್ಗದರ್ಶನದಲ್ಲಿ ಮನಮೋಹನ್ ಸಿಂಗ್ ಅವರು ನೀಡಿದ್ದರು. ಮುಂದಿನ 2026 ರ ಫೆಬ್ರವರಿ‌ ವೇಳೆಗೆ ಈ ಯೋಜನೆಗೆ 20 ವರ್ಷ ತುಂಬಲಿದೆ. ಆದ ಕಾರಣ ದೊಡ್ಡ ಹೋರಾಟವನ್ನು ಹಮ್ಮಿಕೊಳ್ಳಲು ಆಲೋಚಿಸಲಾಗಿದೆ” ಎಂದು ಹೇಳಿದರು.


Share this with Friends

Related Post