Fri. Mar 6th, 2026

ಈ ವ್ಯಕ್ತಿಯನ್ನು ಹಣಕಾಸು ಮಂತ್ರಿ ಮಾಡಿದ್ದು ನಾನು: ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡ ವಾಗ್ದಾಳಿ

Share this with Friends

ಬೆಂಗಳೂರು:ರಾಮಕೃಷ್ಣ ಹೆಗಡೆ ಅವರು ಎಂಟು ವರ್ಷ ಸಿಎಂ ಆಗಿದ್ದರು. ಅವರು ನಿಮ್ಮನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದಾರಾ? ನಿಮ್ಮನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದು ಈ ದೇವೇಗೌಡ.ನಾನು ಬದುಕಿದ್ದೇನೆ, ಸೋನಿಯಾ ಗಾಂಧಿ ಕೂಡ ಬದುಕಿದ್ದಾರೆ. ಸುಳ್ಳು ಹೇಳಬೇಡಿ. ಜೆಡಿಎಸ್ ಪಕ್ಷಕ್ಕೆ ನಿಮ್ಮ ದೇಣಿಗೆ ಹೇಳಿ? ಎಂದು ಸಿಎಂ ಸಿದ್ಧರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಬೆಳ್ಳಿಹಬ್ಬವನ್ನು ಉದ್ಘಾಟಿಸಿ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಭಾಷಣ ಮಾಡಿದ ಮಾಜಿ ಪ್ರಧಾನಿಗಳು;ಹೆಗಡೆ ಅಗಲಿ ಬೊಮ್ಮಾಯಿ ಆಗಲಿ ನಿಮ್ಮನ್ನು ಹಣಕಾಸು ಮಂತ್ರಿ ಮಾಡಲಿಲ್ಲ. ನೀವೇನೂ ಮಹಾ ಮೇಧಾವಿ ಆಗಿದ್ದೀರಾ? ನೀವು ಆಕ್ಸ್ಫರ್ಡ್ ವಿವಿಯಲ್ಲಿ ಹಣಕಾಸು ಪದವಿ ಪಡೆದಿದ್ರಾ? ನೀವು ಸುಪ್ರೀಂ ಕೋರ್ಟ್ ಲಾಯರ್ ಏನೂ ಅಲ್ಲ, ಹೈಕೋರ್ಟ್ ನಲ್ಲಿಯೂ ಲಾಯರ್ ಅಲ್ಲ. ಮೈಸೂರಿನಲ್ಲಿ ಎಲ್ಲೋ ಒಂದೆರಡು ಕೇಸು ವಾದ ಮಾಡಿಕೊಂಡು ಇದ್ದವರು ಎಂದು ಹರಿಹಾಯ್ದರು.

ಹೆಗಡೆ ನಿಮ್ಮನು ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಆಮೇಲೆ ಇನ್ನೊಮ್ಮೆ ಯಾವುದೋ ಪಶು ಸಂಗೋಪನೆ ಅಥವ ಇನ್ನೂ ಯಾವುದೋ ಖಾತೆ ನಿರ್ವಹಿಸಿದಿರಿ. ವೀರಪ್ಪ ಮೊಯಿಲಿ ಸಿಎಂ ಆಗಿದ್ದಾಗ ಸರಕಾರಿ ನೌಕರರ ಸಂಬಳ ಕೊಡೋಕೆ ದುಡ್ಡು ಇಲ್ಲ ಎಂದು ಪಿಯರ್ ಲೆಸ್ ಕಂಪನಿಯಿಂದ 200 ಕೋಟಿ ಸಾಲ ತಂದರು. ಅದಾದ ಮೇಲೆ ಬಂದ ಸರ್ಕಾರದಲ್ಲಿ ನಿಮ್ಮನ್ನು ಹಣಕಾಸು ಮಂತ್ರಿ ಮಾಡಿದೆ. ಆ ಸಾಲ ತಂದ ಸಂದರ್ಭದಲ್ಲಿ ರಾಜ್ಯದಲ್ಲಿ ಹಣಕಾಸು ಸ್ಥಿತಿ ಹದಗೆಟ್ಟು ಹೋಗಿತ್ತು. ನಿಮಗೆ ಗೊತ್ತಿಲ್ಲವೇ? ರಾಜ್ಯದ ಹಣಕಾಸು ಸ್ಥಿತಿ ಸರಿ ಮಾಡಲೇಬೇಕು ಎಂದು ನಾನು ನಿರ್ಧಾರ ಕೈಗೊಂಡು ಈ ವ್ಯಕ್ತಿಯನ್ನು ಹಣಕಾಸು ಮಂತ್ರಿಯನ್ನಾಗಿ ಮಾಡಿದೆ. ಅದೇ ನಾನು ಮಾಡಿದ ತಪ್ಪು ಎಂದು ದೇವೇಗೌಡರು ಬೇಸರ ವ್ಯಕ್ತಪಡಿಸಿದರು.

ಅನೇಕ ಸಂದರ್ಭಗಳಲ್ಲಿ ನಾನು ಈ ವ್ಯಕ್ತಿಯನ್ನು ಉಪ ಮುಖ್ಯಮಂತ್ರಿ ಮಾಡಿದ್ದಕ್ಕೆ ಕಣ್ಣಿರು ಇಟ್ಟೆ. ಅವರನ್ನು ಹಣಕಾಸು ಮಂತ್ರಿ ಮಾಡಿದ್ದು ಹೆಗಡೆ ಅಲ್ಲ, ನಾನು. ಅದನ್ನು ಆ ಮನುಷ್ಯ ನೆನಪು ಇಟ್ಟುಕೊಳ್ಳಬೇಕು ಎಂದು ಗುಡುಗಿದ ಗೌಡರು; ಸಿದ್ಧರಾಮಯ್ಯ ನಮ್ಮ ಪಕ್ಷಕ್ಕೆ ಏನೂ ಕೊಡುಗೆ ನೀಡಿಲ್ಲ. ನಾನು ಆ ವ್ಯಕ್ತಿಯನ್ನು ಪಕ್ಷದ ರಾಜ್ಯದ ಅಧ್ಯಕ್ಷ ಮಾಡಬೇಕು ಎಂದು ಹೊರಟಾಗ ಹೆಗಡೆ ಅವರು ತಮ್ಮ ಕೋಣೆಯಲ್ಲಿ ನನ್ನ ಕೈ ಹಿಡಿದು ಯಾರನ್ನಾದರೂ ಮಾಡು, ಆತನನ್ನು ಮಾತ್ರ ಮಾಡಬೇಡ ಎಂದು ಹೇಳಿದರು. ನಾನು ಹೆಗಡೆ ಅವರ ಮಾತು ಕೇಳಲಿಲ್ಲ ಎಂದರು.

ಸಿದ್ಧರಾಮಯ್ಯ ಅವರನ್ನು ನಾನು ಸಿಎಂ ಮಾಡಲು ತಯಾರಿದ್ದೆ. ಆದರೆ ಸೋನಿಯಾ ಗಾಂಧಿ ಧರ್ಮಸಿಂಗ್ ಅವರನ್ನು ಸಿಎಂ ಮಾಡಲು ಪಟ್ಟು ಹಿಡಿದರು.ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲು ಸೋನಿಯಾ ಗಾಂಧಿ ಸುತಾರಾಂ ಒಪ್ಪಲಿಲ್ಲ. ನೀವು ನಮ್ಮ ಸಿಎಂ ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳಬೇಕು, ಇಲ್ಲವಾದರೆ ನಾವು ಚುನಾವಣೆಗೆ ಹೋಗುತ್ತೇವೆ ಎಂದರು. ನಾವು ವಿಧಿ ಇಲ್ಲದೆ ಒಪ್ಪಿಕೊಂಡೆವು ಎಂದು ದೇವೇಗೌಡರು ಹಳೆಯ ವಿಷಯವನ್ನು ಮೆಲುಕು ಹಾಕಿದರು.

ಅಹಿಂದ ಸಮಾವೇಶ ಮಾಡಲು ಹೊರಟಾಗ ಅದನ್ನು ಪಕ್ಷದ ವೇದಿಕೆಯಲ್ಲಿ ಮಾಡಿ ಎಂದು ಸೂಚಿಸಿದೆ. ಅದನ್ನು ಅವರು ಕೇಳಲಿಲ್ಲ. ಪ್ರತ್ಯೇಕವಾಗಿ ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡುವುದಾಗಿ ಹೊರಟರು. ಕೊನೆಗೆ ಬೇರೆ ದಾರಿ ಇರಲಿಲ್ಲ. ಹೀಗಾಗಿ ನಾನು ಅವರನ್ನು ಪಕ್ಷದಿಂದ ಹೊರ ಹಾಕಲು ನಿರ್ಧಾರ ತೆಗೆದುಕೊಂಡೆ. ಈ ಬಗ್ಗೆ ನನಗೆ ಯಾವ ಪಶ್ಚಾತ್ತಾಪವು ಇಲ್ಲ. ಇಂತಹವರು ಅನೇಕರು ಬಂದಿದ್ದಾರೆ, ಹೋಗಿದ್ದಾರೆ. ಹೆದರುವುದಿಲ್ಲ. ನಾನು ಪಕ್ಷ ಕಟ್ಟುತ್ತೇನೆ. ಎಲ್ಲಿ ಕರೆದರೂ ಹೋಗುತ್ತೇನೆ. ದೇವೇಗೌಡ ಸುಮ್ಮನೆ ಕೂರುವ ವ್ಯಕ್ತಿಯಲ್ಲ ಎಂದರು.


Share this with Friends

Related Post