Thu. Mar 5th, 2026

ಭಗವದ್ಗೀತೆ ಬೋಧಿಸಿ ಎಂದಿದ್ದೇನೆ, ಮತಾಂತರ ಮಾಡಲಿಕ್ಕೆ ಹೇಳಿಲ್ಲ: ಸಿಎಂಗೆ ಕುಮಾರಸ್ವಾಮಿ ತಿರುಗೇಟು

Share this with Friends

ಮಂಡ್ಯ:ನಾನು ಚಿಕ್ಕವನಾಗಿದ್ದಾಗ ನೋಡಿದ್ದ ಸಮಾಜ ಈಗಿಲ್ಲ. ಮನುಷ್ಯ ಸಂಬಂಧಗಳನ್ನು ಬಲಪಡಿಸಿ ಸಮಾಜವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಭಗವದ್ಗೀತೆ ಬೋಧನೆ ಅಗತ್ಯವೆಂದು ಹೇಳಿದ್ದೇನೆಯೇ ಹೊರತು ನಾನೇನು ಮತಾಂತರ ಮಾಡಲಿಕ್ಕೆ ಈ ಹೇಳಿಕೆ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತಂದೆ -ತಾಯಿ, ಅಣ್ಣ-ತಮ್ಮ ಕೊಲೆ ಮಾಡುವಂಥ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಬದುಕಿನ ನಿಯಮಾವಳಿ ಕಲಿಸುವುದು ಸರ್ಕಾರದ ಕರ್ತವ್ಯ. ರಾಜ್ಯದಲ್ಲಿ ಕೆಟ್ಟ ಬೆಳವಣಿಗೆಗಳು ನಡೆಯುತ್ತಿದೆ. ಹಾಸನದಲ್ಲಿ ತಾಯಿ ಆತ್ಮಹತ್ಯೆ ಮಾಡಿಕೊಂಡರು ಎಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈಗಿನ ಸಮಾಜ ವೇಗವಾಗಿ ಬೆಳೆಯುತ್ತಿದೆ. ತಾಯಿ ಹೃದಯ ಅನ್ನುವುದಿಲ್ಲ. ನಾನು ಚಿಕ್ಕವನಾಗಿದ್ದಾಗ ನೋಡಿದ್ದ ಸಮಾಜ ಈಗಿಲ್ಲ. ಮನುಷ್ಯ ಸಂಬಂಧಗಳನ್ನು ಬಲಪಡಿಸಿ ಸಮಾಜವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಭಗವದ್ಗೀತೆ ಬೋಧನೆ ಅಗತ್ಯವೆಂದು ಹೇಳಿದ್ದೇನೆ ಎಂದು ಹೇಳಿದರು.

ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಸೇರಿಸುವಂತೆ ಹೇಳಿದ್ದೇನೆ. ಆ ಬಗ್ಗೆ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಪತ್ರವನ್ನೂ ಬರೆದಿದ್ದೇನೆ. ನಾನೇನು ಮತಾಂತರ ಮಾಡಲಿಕ್ಕೆ ಈ ಹೇಳಿಕೆ ನೀಡಿಲ್ಲ. ಅಷ್ಟಕ್ಕೂ ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ?ಇಂದಿನ ಮಕ್ಕಳ ಬದುಕು, ಇವತ್ತಿನ ಸಮಾಜವನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಯಾವ ರೀತಿ ಬೆಳೆಸುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿ ಹೇಳಿದ್ದೇನೆ ಎಂದು ಟಾಂಗ್‌ ನೀಡಿದರು.

ಸಿದ್ದರಾಮಯ್ಯ ತಲೆಯಲ್ಲಿ ಇರುವುದು ಸಮಾಜದಲ್ಲಿ ಘರ್ಷಣೆ ಉಂಟು ಮಾಡುವುದಷ್ಟೆ. ಕಳೆದ 10 ವರ್ಷದಿಂದ ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯ ಮಜಾ‌‌ ಮಾಡಿದ್ದಾರೆ. ಅವರಿಂದ ಅಹಿಂದಕ್ಕೆ ಸಿಕ್ಕ ಕೊಡುಗೆ ಏನು? ಅಹಿಂದ ಸಮಸ್ಯೆ ಎಷ್ಟು ಬಗೆ ಹರಿಸಿದ್ದಾರೆ? ಅಹಿಂದಲ್ಲಿ ಅನೇಕ ಸಣ್ಣ ಜಾತಿ‌ಗಳಿವೆ.  ಆ ಸಮಾಜಗಳಿಗೆ ಅವರ ಕೊಡುಗೆ ಏನು? ಅವರು ಯಾರಿಗೆ  ಆದ್ಯತೆ ಕೊಟ್ಟಿದ್ದಾರೆ? ಸಂಬಂಧಿಕರ ಜೊತೆ ರಕ್ತದೋಕುಳಿ ನಡೆಸುವುದು ಬೇಡ ಅನ್ನುವುದು ಭಗವದ್ಗೀತೆಯಲ್ಲಿದೆ. ಭಗವದ್ಗೀತೆ ಸಾರಾಂಶ ಜನರಿಗೆ ಮಕ್ಕಳಿಗೆ ಹೇಳುವ ಅವಶ್ಯಕತೆ ಇದೆ. ಈ ಸರ್ಕಾರ ಕಾನೂನುಬಾಹಿರ ಚಟುವಟಿಕೆ ಬೆಂಬಲಿಸುತ್ತದೆ. ಇದರಿಂದ ಭಗವದ್ಗೀತೆ ಈ ಸಂದರ್ಭದಲ್ಲಿ ಅವಶ್ಯಕತೆ ಇದೆ ಎಂದು ನಾನು ಪ್ರತಿಪಾದಿಸಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಇಲ್ಲಸಲ್ಲದ ಆರೋಪ ಮಾಡಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಕೆಲಸ ಆಗುತ್ತಿದೆ ಎಂದು ಶಾಸಕ ಯತೀಂದ್ರ ಹೇಳಿಕೆ ನೀಡಿರುವ ಹೇಳಿಕೆ ಬಗ್ಗೆ  ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ನಡೆದು ಬಂದ ಹಿನ್ನೆಲೆ ಏನು? ಈ ಮಟ್ಟಕ್ಕೆ ಅವರು ಬರಲು ಯಾರು ಕಾರಣ? ಇವರಿಗೆ ಯಾರಿಂದ ತೊಂದರೆಯಾಗಿದೆ? ಅವೆಲ್ಲವನ್ನೂ ಸಹ ಅವರು ಹೇಳಬೇಕು. ಯತೀಂದ್ರ ನಿನ್ನೆ ಮೊನ್ನೆಯಷ್ಟೇ ಬಂದಿದ್ದಾರೆ, ಅವರಿಗೆ ಇತಿಹಾಸ ಗೊತ್ತಿಲ್ಲ ಎಂದು ಹೇಳಿದರು.


Share this with Friends

Related Post