ಕನಕಪುರ: ನಾನು ಪದವಿ ಪಡೆದಿದ್ದು, ನನ್ನ 47ನೇ ವಯಸ್ಸಿನಲ್ಲಿ, ಬಂಗಾರಪ್ಪ, ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ಸಚಿವನಾದಾಗಿಂತ ನನಗೆ ಪದವಿ ಪಡೆದಾಗ ಹೆಚ್ಚು ಖುಷಿಯಾಯಿತು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಕನಕಪುರದಲ್ಲಿ ನಡೆಯುತ್ತಿರುವ ಕನಕೋತ್ಸವದಲ್ಲಿ ನಡೆದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,“ನಾನು ಓದುವಾಗ ನಮ್ಮ ಗುರುಗಳು ಒಂದು ಮಾತು ಹೇಳುತ್ತಿದ್ದರು. ವಿದ್ಯಾ ದದಾತಿ ವಿನಯಂ, ವಿನಯಾತ್ ಯಾತಿ ಪಾತ್ರತಾಂ, ಪಾತ್ರತ್ವಾತ್ ಧನಂ ಆಪ್ನೋತಿ, ಧನಾತ್ ಧರ್ಮ ತಥಃ ಸುಖಂ. ಅಂದರೆ ವಿದ್ಯೆಯಿಂದ ವಿನಯ, ವಿನಯದಿಂದ ವ್ಯಕ್ತಿತ್ವ, ವ್ಯಕ್ತಿತ್ವದಿಂದ ಹಣ, ಹಣದಿಂದ ಧರ್ಮಕಾರ್ಯಗಳು, ಧರ್ಮ ಕಾರ್ಯಗಳಿಂದ ಸುಖ ಸಿಗುತ್ತದೆ ಎಂದರ್ಥ” ಎಂದರು.
“ನಾನು ಪದವಿ ಪಡೆದಿದ್ದು, ನನ್ನ 47ನೇ ವಯಸ್ಸಿನಲ್ಲಿ. ಅಂದರೆ 2008ರಲ್ಲಿ. ನಾನು ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವಾಗ ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಪಕ್ಷದಿಂದ ಚುನಾವಣೆಗೆ ಟಿಕೆಟ್ ನೀಡಲಾಯಿತು. ನಾನು ಬಂಗಾರಪ್ಪ, ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ಸಚಿವನಾದಾಗಿಂತ ನನಗೆ ಪದವಿ ಪಡೆದಾಗ ಹೆಚ್ಚು ಖುಷಿಯಾಯಿತು. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಸಕ್ತಿಯಲ್ಲಿ ಶಿಕ್ಷಣ ತಜ್ಞ, ಆಸಕ್ತಿಯಲ್ಲಿ ನಾನು ರಾಜಕಾರಣಿ” ಎಂದು ಹೇಳಿದರು.
“ನೀವೆಲ್ಲರೂ ಬೆಂಗಳೂರು ಜಿಲ್ಲೆಯ ಮಕ್ಕಳು. ಕನಕಪುರ, ರಾಮನಗರದ ಮಟ್ಟದಲ್ಲಿ ಸ್ಪರ್ಧೆ ಮಾಡುವುದಲ್ಲ, ನಿಮ್ಮ ಸ್ಪರ್ಧೆ ಏನಿದ್ದರೂ ಜಾಗತಿಕ ಮಟ್ಟದಲ್ಲಿ. ಇದು ನಿಮ್ಮ ಗಮನದಲ್ಲಿರಲಿ” ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
“ನೀವು ಪುಸ್ತಕವನ್ನು ಓದಿದರೆ ಸಾಲದು, ನಿಮ್ಮ ಊರು, ತಾಲ್ಲೂಕು, ಜಿಲ್ಲೆ, ರಾಜ್ಯ, ದೇಶದ ಹೆಸರು ಉಳಿಸಿಕೊಂಡು ಹೋಗಬೇಕು. ನಿಮ್ಮ ಶಾಲೆ ಋಣ ತೀರಿಸಬೇಕು. ನಮ್ಮ ತಾಲ್ಲೂಕಿನಲ್ಲಿ ಸಿಎಸ್ಆರ್ ನಿಧಿಯಲ್ಲಿ 15 ಅತ್ಯಾಧುನಿಕ ಶಾಲೆಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದೇವೆ. ಪ್ರತಿ ಶಾಲೆಗೆ 15 ಕೋಟಿ ವೆಚ್ಚ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಸಿಗುವ ಶಿಕ್ಷಣ, ನಿಮಗೆ ಇಲ್ಲೇ ಸಿಗುವಂತೆ ಮಾಡಲಾಗುತ್ತಿದೆ. ನಾನು ರಾಜಕಾರಣಿ, ಉದ್ಯಮಿ ಇರಬಹುದು. ಕನಕಪುರದ ಮಕ್ಕಳ ವಿದ್ಯಾಭ್ಯಾಸ ಭವಿಷ್ಯದ ಬಗ್ಗೆ ಕಾಳಜಿ ಇದೆ. ನೀವು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದರೆ, ನನ್ನ ಮಗಳು ಐಶ್ವರ್ಯ ಬೆಳೆದಷ್ಟೇ ಸಂತೋಷವಾಗುತ್ತದೆ” ಎಂದು ತಿಳಿಸಿದರು.
ತನಿಖೆ ಮುಗಿದ ಬಳಿಕ ಪ್ರತಿಕ್ರಿಯಿಸುವೆ:
ಇನ್ನು ಕನಕಪುರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು. ಸಿ.ಜೆ ರಾಯ್ ಅವರ ಸಾವಿಗೆ ಪದೇ ಪದೆ ಐಟಿ ದಾಳಿಯೇ ಕಾರಣ ಎಂದು ಅವರ ವಕೀಲರು, ಸಹೋದರರು ತಿಳಿಸಿದ್ದಾರೆ ಎಂದು ಕೇಳಿದಾಗ, “ಪೊಲೀಸರು ಈ ವಿಚಾರವಾಗಿ ತನಿಖೆ ಮಾಡುತ್ತಾರೆ. ತನಿಖೆ ಮುಗಿದು ವರದಿ ಬರಲಿ, ನಂತರ ಮಾತನಾಡುತ್ತೇನೆ” ಎಂದು ಹೇಳಿದರು.

