Sat. Mar 7th, 2026

ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ,ಎಐಸಿಸಿ ಅಧ್ಯಕ್ಷರ ಭೇಟಿಯಾಗುತ್ತೇನೆ:ಸಿದ್ದರಾಮಯ್ಯ

Share this with Friends

ಮೈಸೂರು:ಮುಖ್ಯಮಂತ್ರಿಯಾಗಿ ನಾನೇ ಮುಂದುವರೆದು, ಮುಂದಿನ ಬಜೆಟ್ ಗಳನ್ನು ನಾನೇ ಮಂಡಿಸುತ್ತೇನೆ, ನಾಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನರ್ರಚನೆ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ವರಿಷ್ಠರ ತೀರ್ಮಾನಕ್ಕೆ ಪಕ್ಷದ ಪ್ರತಿಯೊಬ್ಬರೂ ಬದ್ಧರಾಗಿರಬೇಕು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದಂತೆ ನಾನೆಂದೂ ಮಾತಿಗೆ ತಪ್ಪುವುದಿಲ್ಲ. ರಾಜ್ಯದ ಜನರಿಗೆ ನೀಡಿದ ಗ್ಯಾರಂಟಿಯ ಭರವಸೆಯನ್ನು ಈಡೇರಿಸಿದ್ದೇನೆ. ಮುಖ್ಯಮಂತ್ರಿಯಾಗಿ ನಾನೇ ಮುಂದುವರೆದು, ಮುಂದಿನ ಬಜೆಟ್ ಗಳನ್ನು ನಾನೇ ಮಂಡಿಸುವೆ. ಇಂದು ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿಗೆ ಆಗಮಿಸಲಿದ್ದು, ನಾಳೆ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ ಎಂದರು.

ಕೇಂದ್ರದಿಂದ 70 ಲಕ್ಷ ಮೆ.ಟನ್ ಮೆಕ್ಕೆಜೋಳ ಆಮದು:

ಒಂದು ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2400 ರೂ.ಗಳ ಎಂಎಸ್ ಪಿ ದರ ನಿಗದಿಯಾಗಿದ್ದು, ಇದುವರೆಗೆ ಖರೀದಿ ಕೇಂದ್ರ ಪ್ರಾರಂಭವಾಗಿಲ್ಲ. ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ಮೆಕ್ಕೆಜೋಳದ ಖರೀದಿ ಬಗ್ಗೆ ಸಂಬಂಧಪಟ್ಟ ಸಚಿವರು , ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಮಾರುಕಟ್ಟೆಯಲ್ಲಿ  ಮೆಕ್ಕೆಜೋಳದ ಬೆಲೆ ಕುಸಿತ ಕಂಡಿದ್ದು, ಉತ್ಪಾದನೆ ಹೆಚ್ಚಾಗಿದೆ. ಸುಮಾರು 55 ಲಕ್ಷ ಮೆಟ್ರಿಕ್ ಟನ್ ನಷ್ಟು ಮೆಕ್ಕೆಜೋಳವನ್ನು ರೈತರು ಬೆಳೆಯಬಹುದೆಂಬ ಅಂದಾಜಿದೆ. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮೆಕ್ಕೆ ಜೋಳ ಉತ್ಪತ್ತಿಯಲ್ಲಿ ಏರಿಕೆ ಕಂಡಿದ್ದರೂ ಸಹ , ಕೇಂದ್ರ ಸರ್ಕಾರ ಸುಮಾರು 70 ಲಕ್ಷ ಮೆ.ಟನ್ ನಷ್ಟು ಮೆಕ್ಕೆಜೋಳವನ್ನು ಆಮದು ಮಾಡಿಕೊಳ್ಳುತ್ತಿದೆ. ಕೇಂದ್ರದ ಈ ನಿರ್ಧಾರದಿಂದ ನೋಡಲೆ ಏಜೆನ್ಸಿಗಳಾದ ನಫೆಡ್, ಎನ್ ಸಿ ಸಿಎಫ್ ಸಂಸ್ಥೆಗಳು ಮೆಕ್ಕೆ ಜೋಳ ಖರೀದಿ ಪ್ರಕ್ರಿಯೆ ನಡೆಸದೇ ಇರುವುದರಿಂದ, ರೈತರು ಕೆಲವಡೆ ಧರಣಿ ನಡೆಸುತ್ತಿದ್ದಾರೆ ಎಂದರು.

ಮೆಕ್ಕೆಜೋಳ ಖರೀದಿಗೆ ಡಿಸ್ಟಲರಿಗಳೊಂದಿಗೆ ಚರ್ಚೆ:

ಡಿಸ್ಟಿಲರಿಗಳು ಮೆಕ್ಕೆ ಜೋಳ ಬೆಲೆ ಕಡಿಮೆ ಇದ್ದಾಗಲೇ ಹಿಂದೆಯೇ ಖರೀದಿಸಿ ಶೇಖರಣೆ ಮಾಡಿಕೊಂಡಿವೆ. ಮೆಕ್ಕೆಜೋಳವನ್ನು ನಿಯಮಾಸುಸಾರ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸಲು ಡಿಸ್ಟಲರಿ ಮಾಲೀಕರೊಂದಿಗೆ ಚರ್ಚಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸರ್ಕಾರದಿಂದ 10 ಲಕ್ಷ ಮೆ.ಟನ್ ಖರೀದಿ:

ಮೆಕ್ಕೆಜೋಳದ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಎಲ್ಲ ರೀತಿಯ ಸಹಾಯವನ್ನು ಸರ್ಕಾರ ಮಾಡಲಿದೆ. ರಾಜ್ಯ ಸರ್ಕಾರ, ರೈತರಿಂದ  ಸುಮಾರು 10 ಲಕ್ಷ ಮೆ.ಟನ್ ಮೆಕ್ಕೆಜೋಳ ಖರೀದಿಗೆ ಖರೀದಿ ಕೇಂದ್ರ ಸ್ಥಾಪಿಸಲು ಸೂಚನೆ ನೀಡಲಾಗಿದೆ. ದೇಶದಲ್ಲಿಯೇ ಹೇರಳವಾಗಿ ಮೆಕ್ಕೆಜೋಳವನ್ನು  ಬೆಳೆದಿದ್ದು, ಅದನ್ನು ಆಮದು ಮಾಡಿಕೊಳ್ಳದಂತೆ ಕೇಂದ್ರ ಸರ್ಕಾರವನ್ನು ಪತ್ರಮುಖೇನ ಕೋರಲಾಗುವುದು ಎಂದರು.


Share this with Friends

Related Post