ಬೆಂಗಳೂರು: ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಅಧ್ಯಕ್ಷರು ಎಲ್ಲಿಯವರೆಗೂ ಜವಾಬ್ದಾರಿ ನಿಭಾಯಿಸಲು ಸೂಚಿಸುತ್ತಾರೋ ಅಲ್ಲಿಯವರೆಗೂ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕರ್ತವ್ಯ ನಿಭಾಯಿಸುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಬುಧವಾರ ನಡೆದ ಇಂದಿರಾ ಗಾಂಧಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹುದ್ದೆಯಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಈಗಾಗಲೇ ಐದೂವರೆ ವರ್ಷವಾಗಿದೆ, ಮಾರ್ಚ್ ಬಂದರೆ ಆರು ವರ್ಷವಾಗಲಿದೆ. ಬೇರೆಯವರಿಗೆ ಅವಕಾಶ ನೀಡಬೇಕು. ನಾನು ನಾಯಕತ್ವದಲ್ಲಿ ಇರುತ್ತೇನೆ, ತಲೆಕೆಡಿಸಿಕೊಳ್ಳಬೇಡಿ. ನಾನು ಉಪಮುಖ್ಯಮಂತ್ರಿಯಾದ ದಿನವೇ ಈ ಹುದ್ದೆ ಬಿಡಬೇಕು ಎಂದು ನಿರ್ಧರಿಸಿದ್ದೆ. ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರು ಇನ್ನು ಸ್ವಲ್ಪ ದಿನ ಮುಂದುವರಿಯಲು ಹೇಳಿದ್ದಾರೆ. ನಾನು ನನ್ನ ಕರ್ತವ್ಯ ನಿಭಾಯಿಸುತ್ತಿದ್ದೇನೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಮುಂದುವರಿಯುವ ಬಗ್ಗೆ ಗೊಂದಲ ಬೇಡ, ಪಕ್ಷ ಏನು ಹೇಳುತ್ತದೆಯೋ ಅದನ್ನು ನಾನು ಪಾಲಿಸುತ್ತೇನೆ. ಪಕ್ಷದ ಅದ್ಯಕ್ಷರಾದವರು ಹೇಗೆ ಕೆಲಸ ಮಾಡಬೇಕು ಎಂದು ನಾನು ಉದಾಹರಣೆಯಾಗಬೇಕು, ಪಕ್ಷದಲ್ಲಿ ನಮ್ಮ ಗುರುತು ಬಿಟ್ಟುಹೋಗಬೇಕು. ನಾನು ಈ ವಿಚಾರವಾಗಿ ಮಾತನಾಡುತ್ತಿದ್ದೇನೆ ಹೊರತು, ತ್ಯಾಗ ಅಥವಾ ಓಡಿ ಹೋಗುವ ಬಗ್ಗೆ ಮಾತನಾಡುತ್ತಿಲ್ಲ. ನಾನು ಓಡಿ ಹೋಗುವ ಮನುಷ್ಯನಲ್ಲ. ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಅಧ್ಯಕ್ಷರು ಎಲ್ಲಿಯವರೆಗೂ ಜವಾಬ್ದಾರಿ ನಿಭಾಯಿಸಲು ಸೂಚಿಸುತ್ತಾರೋ ಅಲ್ಲಿಯವರೆಗೂ ನಾನು ಕರ್ತವ್ಯ ನಿಭಾಯಿಸುತ್ತೇನೆ ಎಂದು ತಿಳಿಸಿದರು.
ಸಧ್ಯದಲ್ಲಿ ನೂರು ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದಕ್ಕೆ ಯಾರು ಸಹಕಾರ ನೀಡಿದ್ದಾರೆ, ನೀಡಿಲ್ಲ ಎಂದು ಪಟ್ಟಿ ನೀಡಿ ಎಂದು ಎಐಸಿಸಿ ನಾಯಕರು ತಿಳಿಸಿದ್ದಾರೆ. ಕೆಲವರು ಆಸಕ್ತಿ ತೋರಿದ್ದಾರೆ, ಕೆಲವರು ಆಸಕ್ತಿ ತೋರಿಲ್ಲ. ಕೆಲವರಿಗೆ ಕೇವಲ ಅಧಿಕಾರ ಮಾತ್ರ ಬೇಕು. ಈ ಕಾಂಗ್ರೆಸ್ ಕಚೇರಿ ದೇವಾಲಯ ಎಂಬುದನ್ನು ಕೆಲವರು ಮರೆತಿದ್ದಾರೆ. ಇದಕ್ಕೆ ನಾನು ಉತ್ತರ ನೀಡುವುದಿಲ್ಲ. ದೆಹಲಿ ನಾಯಕರು ಸರಿಯಾದ ಸಮಯದಲ್ಲಿ ಉತ್ತರ ನೀಡುತ್ತಾರೆ. ನಾನು ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ. ನನ್ನ ಅವಧಿಯಲ್ಲಿ ನೂರು ಕಾಂಗ್ರೆಸ್ ಕಚೇರಿ ಮಾಡಬೇಕು ಎಂಬುದು ನನ್ನ ಬಯಕೆ. ಈ ಸಂದರ್ಭದಲ್ಲಿ ಗಾಂಧಿ ಭಾರತ ಎಂಬ ಪುಸ್ತಕ ಬಿಡುಗಡೆ ಮಾಡಿಸಲಾಗುವುದು. ನೂರು ವರ್ಷಗಳ ಹಿಂದೆ ಗಾಂಧಿಜಿ ಅವರ ಅಧ್ಯಕ್ಷತೆಯಡಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಕಾರ್ಯಕ್ರಮದ ದಾಖಲೆ ಆಧರಿಸಿ ಹಾಗೂ ನಮ್ಮ ಕಾರ್ಯಕ್ರಮಗಳನ್ನೂ ಸೇರಿಸಿ ಪುಸ್ತಕ ರಚಿಸಲಾಗಿದೆ ಎಂದು ತಿಳಿಸಿದರು.
ನಾನು ಎಲ್ಲಿರುತ್ತೇನೆ ಎಂಬುದು ಮುಖ್ಯವಲ್ಲ. ಈ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ನೀವು ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ, ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ಅನೇಕ ನಿಗಮಮಂಡಳಿ ನಿರ್ದೇಶಕರ ಪಟ್ಟಿ ಸಿದ್ಧವಾಗಿದ್ದು, ಮರುಪರಿಶೀಲನೆ ಮಾಡಿಸಿ, ಬ್ಲಾಕ್ ಅಧ್ಯಕ್ಷರಿಗೆ ಅಧಿಕಾರ ಕೊಡಬೇಕಾಗಿದೆ. ಪಕ್ಷದ ಸದಸ್ಯತ್ವ ನೋಂದಣಿಯಲ್ಲಿ ಹೆಚ್ಚು ಸಹಿ ಸದಸ್ಯತ್ವ ಮಾಡಿಸಿದ ಹೊಳಲ್ಕೆರೆಯ ಸವಿತಾ ಎಂಬಾಕೆಗೆ ಅಧ್ಯಕ್ಷ ಸ್ಥಾನ ಕೊಡಿಸಿದ್ದೆ. ಆಕೆ ಅಧಿಕಾರವನ್ನು ತನ್ನ ಗಂಡನಿಗೆ ಬಿಟ್ಟುಕೊಟ್ಟಿದ್ದಾಳೆ. ಅದಕ್ಕಾಗಿ ಎನ್ಎಸ್ ಯುಐ, ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದವರಿಗೆ ಅವಕಾಶ ನೀಡಿದ್ದೇವೆ. ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. ಗ್ಯಾರಂಟಿ ಸಮಿತಿಗಳ ಮೂಲಕ ಪ್ರತಿ ಸಮಿತಿಯಲ್ಲಿ 15 ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. ಇಡೀ ದೇಶದಲ್ಲಿ ಕಾರ್ಯಕರ್ತರಿಗೆ ಈ ರೀತಿ ಅಧಿಕಾರ ನೀಡಿರುವುದು ನಮ್ಮಲ್ಲಿ ಮಾತ್ರ ಎಂದರು.

