ಮೈಸೂರು,ಜೂ.30: ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದರೆ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಶಾಸಕ ಜಿಟಿ ದೇವೇಗೌಡ ಡಿಕೆಶಿ ಪರ ಮಾತನಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಂದೆ ಕಾಂಗ್ರೆಸ್ ವೀಕ್ ಆಗಿತ್ತು, ಅವಾಗ ಸಿದ್ದರಾಮಯ್ಯ ಸ್ಟ್ರಾಂಗ್ ಆಗಿದ್ದರು,ಈಗ ಕಾಂಗ್ರೆಸ್ ಹೈಕಮಾಂಡ್ ಸ್ಟ್ರಾಂಗ್ ಇದೆ, ಸಿದ್ದರಾಮಯ್ಯ ಕೂಡ ಹೈಕಮಾಂಡ್ ಹೇಳಿದಂತೆ ಎಂದಿದ್ದಾರೆ, ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದರೆ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ತಿಳಿಸಿದರು.
ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಹೇಳಿಲ್ಲ, ಅವರ ಶಾಸಕರೂ ಕೂಡ ಹೇಳಿಲ್ಲ, ಒಕ್ಕಲಿಗ ಸ್ವಾಮೀಜಿಗಳು ಬಹಿರಂಗವಾಗಿ ಮನವಿ ಮಾಡಿದ್ದಾರೆ.ಹಿಂದೆ ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಕುರುಬ ಸಮುದಾಯದ ಸ್ವಾಮೀಜಿ ದೊಡ್ಡದಾಗಿ ಹೇಳಿರಲಿಲ್ವಾ ಎಂದರು.
ಪವರ್ ಶೇರಿಂಗ್ ಬಗ್ಗೆ ಮಾಧ್ಯಮದವರೇ ಹೇಳಿದ್ದೀರಿ. ಅದರ ಆಧಾರದಲ್ಲಿ ಸಿದ್ದರಾಮಯ್ಯ ಆದ ಮೇಲೆ ಶಿವಕುಮಾರ್ ಸಿಎಂ ಆಗಲಿ ಎಂದು ಹೇಳಿದ್ದಾರೆ. ಇದು ದೊಡ್ಡ ಅಪರಾಧ ಅಲ್ಲ ಬಿಡಿ ಎಂದು ಜಿಟಿಡಿ ಹೇಳಿದರು.
ಸಿದ್ದರಾಮಯ್ಯ ಸುದೀರ್ಘವಾಗಿ ಮಂತ್ರಿ, ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ.15 ಭಾರಿ ಹಣಕಾಸ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಯಾವ ರೀತಿ ಅಧಿಕಾರ ಉಳಿಸಿಕೊಳ್ಳಬೇಕೆಂಬ ಬಗ್ಗೆ ಅನುಭವ ಅವರ ಜೀವನದಲ್ಲಿ ಸಾಕಷ್ಟು ಆಗಿದೆ. ಹೀಗಾಗಿ ಸಡನ್ ಆಗಿ ಅವರು ಬಿಡುತ್ತಾರೆ ಎಂದು ಹೇಳಕ್ಕಾಗಲ್ಲ.
ರಾಜ್ಯ ಸರ್ಕಾರ ಪತನವಾಗುತ್ತೆ, ನಾವು ಬೀಳಿಸುತ್ತೇವೆ ಎಂಬ ಬಗ್ಗೆ ಮಾತನಾಡುವುದು ಸರಿಯಲ್ಲಾ, ಸಂಪೂರ್ಣ ಬಹುಮತವಿರುವ ಸರ್ಕಾರ ಬೀಳಿಸುವ ಪ್ರಶ್ನೆಯೇ ಇಲ್ಲ ಎಂದು ಜಿಟಿಡಿ ಸ್ಪಷ್ಟಪಡಿಸಿದರು.
ವಾಲ್ಮೀಕಿ ನಿಗಮದ ಪ್ರಕರಣ ಸಿಬಿಐ ತನಿಖೆಗೆ ಕೊಡಬೇಕು. ಎಸ್ಟಿ ಸಮುದಾಯದ ನೂರಾರು ಕೋಟಿ ಹಣ ಹಗಲು ದರೋಡೆಯಾಗಿದೆ. ಇದು ಎಲ್ಲರೂ ತಲೆ ತಗ್ಗಿಸುವ ವಿಚಾರ. ಸಿಎಂ ಸಿದ್ದರಾಮಯ್ಯ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳುವಂತೆಯೇ ಇಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಮಾಡುವುದನ್ನು ಸಂಪೂರ್ಣವಾಗಿ ಕೈ ಬಿಟ್ಟಿದ್ದಾರೆ.13 ತಿಂಗಳಿನಿಂದ ಯಾವ ಗುಂಡಿಗಳು ಮುಚ್ಚಿಲ್ಲ, ರಸ್ತೆ ಮಾಡಿಲ್ಲ ನನ್ನ ಕ್ಷೇತ್ರಕ್ಕೆ ಯಾವ ಇಲಾಖೆಯಿಂದಲೂ ಒಂದು ರೂ. ಅನುದಾನ ಬಂದಿಲ್ಲ ಎಂದು ಜಿ.ಟಿ.ದೇವೇಗೌಡ ಆರೋಪಿಸಿದರು.