ಬೆಂಗಳೂರು: “ಆರೋಗ್ಯವಂತ ಮಹಿಳೆಯರು ಆರೋಗ್ಯವಂತ ಕುಟುಂಬಗಳನ್ನು ರೂಪಿಸುತ್ತಾರೆ. ಇಂತಹ ಕುಟುಂಬಗಳಿಂದ ಸದೃಢ ರಾಷ್ಟ್ರ ಹಾಗೂ ಶಕ್ತಿಶಾಲಿ ಭವಿಷ್ಯ ನಿರ್ಮಾಣವಾಗಲು ಸಾಧ್ಯ,” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಎಂ ಪವರ್ ಇಂಗ್ ಮೈಂಡ್ಸ್ 2026’ (Mpowering Minds 2026) ಮಹಿಳಾ ಮಾನಸಿಕ ಆರೋಗ್ಯ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,”ಬೆಂಗಳೂರು ಸದಾ ಹೊಸ ಆಲೋಚನೆ ಮತ್ತು ಭಿನ್ನವಾಗಿ ಯೋಚಿಸುವ ಧೈರ್ಯವುಳ್ಳ ನಗರ. ಮಹಿಳೆಯರ ಮಾನಸಿಕ ಆರೋಗ್ಯದ ವಿಷಯದಲ್ಲೂ ಇಂದು ಅಂತಹದ್ದೇ ಧೈರ್ಯದ ಅಗತ್ಯವಿದೆ. ಸಮಸ್ಯೆಗಳ ಬಗ್ಗೆ ಮಾತನಾಡಲು, ಇತರರು ಹೇಳುವುದನ್ನು ಕೇಳಿಸಿಕೊಳ್ಳಲು ಹಾಗೂ ಪರಿಹಾರಗಳನ್ನು ಕಾರ್ಯಗತಗೊಳಿಸಲು ನಾವೆಲ್ಲರೂ ಮುಂದಾಗಬೇಕು,” ಎಂದು ಕರೆ ನೀಡಿದರು. ಮಾನಸಿಕ ಆರೋಗ್ಯ ಎಂಬುದು ಕೇವಲ ಚರ್ಚೆಯ ವಿಷಯವಲ್ಲ, ಅದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ ಎಂದರು.
ಮೌನ ಹೊರೆ ಎದುರಿಸುತ್ತಿರುವ ಮಹಿಳೆ:
ಮಹಿಳೆಯರು ಮನೆ, ಕಚೇರಿ ಹಾಗೂ ಸಮಾಜದ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಈ ಸಾಧನೆಯ ಹಿಂದೆ ಒಂದು ಮೌನವಾದ ಭಾವನಾತ್ಮಕ ಹೊರೆ ಇರುತ್ತದೆ. ಕುಟುಂಬದ ಜವಾಬ್ದಾರಿ, ಸಾಮಾಜಿಕ ನಿರೀಕ್ಷೆಗಳು ಮತ್ತು ತ್ಯಾಗಗಳ ನಡುವೆ ಅನೇಕ ಮಹಿಳೆಯರು ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಹಸನ್ಮುಖಿಯಾಗಿ ಕಾಣುವ ಅನೇಕ ಬಲಿಷ್ಠ ಮಹಿಳೆಯರ ಹಿಂದೆ ಕಾಣದ ಹೋರಾಟವಿರುತ್ತದೆ ಎಂದು ಸಚಿವರು ವಿಷಾದಿಸಿದರು.
ಸಾಮೂಹಿಕ ಜವಾಬ್ದಾರಿ:
“ಬಾಲಕಿಯರ ವಿದ್ಯಾಭ್ಯಾಸದ ಒತ್ತಡದಿಂದ ಹಿಡಿದು, ವೃದ್ಧೆಯರ ಏಕಾಂತದವರೆಗೆ ಮಹಿಳೆಯರು ಪ್ರತಿ ಹಂತದಲ್ಲೂ ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾರೆ. ರಾಜ್ಯದ ಸಾವಿರಾರು ಮಹಿಳೆಯರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬುದು ಕೇವಲ ಅಂಕಿ-ಅಂಶವಲ್ಲ, ಅದು ಜೀವಗಳ ಪ್ರಶ್ನೆ. ಇದನ್ನು ಕೇವಲ ಒಂದು ಸಂಸ್ಥೆ ಅಥವಾ ಸರ್ಕಾರ ಮಾತ್ರ ಸರಿಪಡಿಸಲು ಸಾಧ್ಯವಿಲ್ಲ. ಸಮುದಾಯ ಮತ್ತು ಸಂಸ್ಥೆಗಳು ಒಟ್ಟಾಗಿ ಜವಾಬ್ದಾರಿ ವಹಿಸಿಕೊಂಡಾಗ ಮಾತ್ರ ಬದಲಾವಣೆ ಸಾಧ್ಯ,” ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕಳೆದ ಹತ್ತು ವರ್ಷಗಳಿಂದ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ‘ಎಂ ಪವರ್’ (Mpower) ಸಂಸ್ಥೆಯ ಕಾರ್ಯವನ್ನು ಸಚಿವರು ಶ್ಲಾಘಿಸಿದರು.
ಆರ್ಥಿಕ ಶಕ್ತಿಯಾಗಿ ಗ್ಯಾರಂಟಿ ಯೋಜನೆಗಳು:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಕುರಿತು ಮಾತನಾಡಿದ ಸಚಿವರು, “ಮಹಿಳೆಯರ ಸಬಲೀಕರಣವೇ ನಮ್ಮ ಸರ್ಕಾರದ ಮೂಲ ಮಂತ್ರ. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡಲಾಗುತ್ತಿರುವ 2,000 ರೂ. ಧನಸಹಾಯ ಮತ್ತು ಶಕ್ತಿ ಯೋಜನೆಯಡಿ ಒದಗಿಸಲಾದ ಉಚಿತ ಬಸ್ ಪ್ರಯಾಣ ಸೌಲಭ್ಯವು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ದೊಡ್ಡ ಶಕ್ತಿ ತುಂಬಿದೆ. ಹಣಕಾಸಿನ ವಿಚಾರದಲ್ಲಿ ಮಹಿಳೆ ತನ್ನ ಕಾಲಿನ ಮೇಲೆ ತಾನು ನಿಲ್ಲುವಂತೆ ಮಾಡುವುದು ನಮ್ಮ ಗುರಿ,” ಎಂದರು.

