ಬೆಂಗಳೂರು:ನಿಮಗೆ ಗಾಂಧಿಜಿ ಮೇಲೆ ದ್ವೇಷ ಇದೆ ಎಂದು ನಮಗೆ ಗೊತ್ತಿದೆ. ಆ ದ್ವೇಷವನ್ನು ನಮ್ಮ ಯುವ ಜನತೆ ಹಾಗೂ ಗ್ರಾಮೀಣ ಭಾಗದ ಜನರ ಮೇಲೆ ತೀರಿಸಿಕೊಳ್ಳುತ್ತಿರುವುದೇಕೆ? ನಿಮಗೆ ನಾಥುರಾಮ್ ಗೋಡ್ಸೆ ಇಷ್ಟವಾದರೆ, ಅವರ ಹೆಸರನ್ನೇ ಇಡಿ. ಜಿ ನಾಥುರಾಮ್ ಜಿ ಅಂತಲೇ ಹೆಸರಿಡಿ. ಆದರೆ ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡಿ, ಪಂಚಾಯ್ತಿ ಮಟ್ಟ ಬಲಪಡಿಸಿ, ಗ್ರಾಮಗಳ ಆಸ್ತಿ ಸೃಜನೆ ಮಾಡಿ ಎಂದು ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಮೋದಿ ಸರ್ಕಾರ ಸಂಸತ್ತಿನಲ್ಲಿ ಯಾವುದೇ ಚರ್ಚೆ ಮಾಡದೇ ವಿಬಿ ಜಿ ರಾಮ್ ಜಿ ಮಸೂದೆ ಅಂಗೀಕರಿಸಿದೆ. ಮನರೇಗಾ ಯೋಜನೆ ಕಾಯ್ದೆ ಸುಧಾರಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಇವರು ಸುಧಾರಿಸಿಯೂ ಇಲ್ಲ, ಸಬಲೀಕರಣ ಮಾಡಿಲ್ಲ. ಮನರೇಗಾ ಕಾಯ್ದೆಯನ್ನು ತೆಗೆದು ಹಾಕಿದ್ದಾರೆ. ಈಗ ಇದು ಕಾಯ್ದೆಯಾಗಿ ಉಳಿದಿಲ್ಲ. ಇತರೆ ಸರ್ಕಾರಿ ಯೋಜನೆಗಳಲ್ಲಿ ಒಂದಾಗಿದೆ ಎಂದರು.
ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರತಿ ವರ್ಷ ವೇತನ ಪರಿಷ್ಕರಣೆಯಾಗುತ್ತಿತ್ತು. ಆದರೆ ಹೊಸ ಯೋಜನೆಯಲ್ಲಿ ಇದನ್ನು ತೆಗೆದುಹಾಕಲಾಗಿದೆ. ಮನರೇಗಾದಲ್ಲಿ ಪಂಚಾಯಿತಿಗಳ ಮೂಲಕ ಕೆಲಸ ಕೈಗೊಳ್ಳುತ್ತಿದ್ದರು. ಈಗ ಈ ಕೆಲಸಗಳನ್ನು ನಿರ್ಧರಿಸುವವರು ಗ್ರಾಮಸ್ಥರು ನಿರ್ಧರಿಸುವುದಿಲ್ಲ. ದೆಹಲಿಯಲ್ಲಿ ಕೂತಿರುವವರು ನಿರ್ಧಾರ ಮಾಡುತ್ತಾರೆ. ಪಿ.ಎಂ ಗತಿಶಕ್ತಿ ಮಾಸ್ಟರ್ ಪ್ಲಾನ್ ಜೊತೆ ಸೇರಿಸಿದ್ದಾರೆ. ಪಿಎಂ ಗತಿಶಕ್ತಿ ಎಂಬುದು 500 ಕೋಟಿಗೂ ಹೆಚ್ಚು ಮೊತ್ತದ ಕೇಂದ್ರ ಸರ್ಕಾರ ಯೋಜನೆಗಳ ಮೇಲುಸ್ತುವಾರಿ ಮಾಡುವ ಪೋರ್ಟಲ್ ಆಗಿದೆ. ನೀವು ಈ ಪಿಎಂ ಗತಿ ಶಕ್ತಿ ಪೋರ್ಟಲ್ ನಲ್ಲಿ ನಿಮ್ಮ ಹೊಲದ ಕೆಲಸದ ಬಗ್ಗೆ ಮಾಹಿತಿ ಹಾಕಲು ಸಾಧ್ಯವೇ? ಎಂದರು.
ಮನರೇಗಾದಲ್ಲಿ ಕೇಂದ್ರ ಸರ್ಕಾರದ ಅನುದಾನವಿತ್ತು. ಈಗ 60:40 ಅನುಪಾತದಲ್ಲಿ ರಾಜ್ಯ ಸರ್ಕಾರದ ಮೇಲೆ ಹೊರೆ ಹಾಕಿದ್ದಾರೆ. ಸೆಕ್ಷನ್ 22(1)ರಲ್ಲಿ ಇದರ ತಿಳಿಸಲಾಗಿದೆ. ನಿಮ್ಮ ಪಂಚಾಯ್ತಿ ಅಧಿಸೂಚನೆ ಹೊರಡಿಸಬೇಕು. ನಂತರ ಕೇಂದ್ರ ಸರ್ಕಾರದ ಮಾನದಂಡಗಳ ಅನುಸಾರ ಇರಬೇಕು. ನಂತರ 60:40 ಅನುಪಾತದಲ್ಲಿ ರಾಜ್ಯ ಸರ್ಕಾರ ಅನುದಾನ ನೀಡಬೇಕು. ಈ ಯೋಜನೆಯಲ್ಲಿ ಹೆಚ್ಚುವರಿ ವೆಚ್ಚವಾದರೆ ಅದನ್ನು ರಾಜ್ಯ ಸರ್ಕಾರವೇ ಭರಿಸಬೇಕು. 100% ಕೇಂದ್ರ ಸರ್ಕಾರದ ಯೋಜನೆಯಾಗಿದ್ದ ಈ ಯೋಜನೆ ಈಗ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಪರಿವರ್ತನೆಯಾಗಿದೆ ಎಂದರು.
ಕೇಂದ್ರ ಸರ್ಕಾರ ಗಾಂಧಿಜಿ ಅವರ ಹೆಸರು ತೆಗೆದಿದೆ ಎಂಬ ವಿಚಾರಕ್ಕೆ ಮಾತ್ರ ನಾವು ಇದನ್ನು ವಿರೋಧ ಮಾಡುತ್ತಿಲ್ಲ. ನಿಮಗೆ ಗಾಂಧಿಜಿ ಮೇಲೆ ದ್ವೇಷ ಇದೆ ಎಂದು ನಮಗೆ ಗೊತ್ತಿದೆ. ಆ ದ್ವೇಷವನ್ನು ನಮ್ಮ ಯುವ ಜನತೆ ಹಾಗೂ ಗ್ರಾಮೀಣ ಭಾಗದ ಜನರ ಮೇಲೆ ತೀರಿಸಿಕೊಳ್ಳುತ್ತಿರುವುದೇಕೆ? ನಿಮಗೆ ನಾಥುರಾಮ್ ಗೋಡ್ಸೆ ಇಷ್ಟವಾದರೆ, ಅವರ ಹೆಸರನ್ನೇ ಇಡಿ. ಜಿ ನಾಥುರಾಮ್ ಜಿ ಅಂತಲೇ ಹೆಸರಿಡಿ. ಆದರೆ ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡಿ, ಪಂಚಾಯ್ತಿ ಮಟ್ಟ ಬಲಪಡಿಸಿ, ಗ್ರಾಮಗಳ ಆಸ್ತಿ ಸೃಜನೆ ಮಾಡಿ. ಮೋದಿ ಸರ್ಕಾರ ಬಂದ ನಂತರ ಜನರಿಗೆ ಉದ್ಯೋಗ ಸೃಷ್ಟಿ ಮಾಡುವ ಯಾವ ಯೋಜನೆ ತಂದಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಈಗ, ಗ್ರಾಮೀಣ ಭಾಗದ ಜನರ ಜೀವನುಪಾಯ ಹಕ್ಕು ಕಸಿಯುತ್ತಿದ್ದಾರೆ ಎಂದರು.
ರೈತರ ಕಾನೂನನ್ನು ಅವರು ಹೇಗೆ ಹಿಂಪಡೆದರೋ, ಇದನ್ನು ಅದೇ ರೀತಿ ಹಿಂಪಡೆಯಲಿದ್ದಾರೆ. ಹಳ್ಳಿಯಿಂದ ದಿಲ್ಲಿಯವರೆಗೆ ಜನರಿಗೆ ಅಸಮಾಧಾನವಿದೆ. ಜನ ಬೀದಿಗಿಳಿಯುತ್ತಾರೆ. ಈ ಜನ ವಿರೋಧಿ ನೀತಿಯನ್ನು ನಮ್ಮ ಸರ್ಕಾರ ಖಂಡಿಸುತ್ತದೆ ಎಂದರು.

