ಗದಗ: ಮಧ್ಯಪ್ರದೇಶ ಮಾದರಿಯಲ್ಲಿ ಮೈಕ್ರೋ ಇರಿಗೇಷನ್ ವ್ಯವಸ್ಥೆಯನ್ನ ಮುಂಡರಗಿ ತಾಲೂಕಿನಲ್ಲಿ ಜಾರಿಗೆ ತಂದರೆ ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಎಲ್ಲ ರೈತರಿಗೂ ನೀರಾವರಿ ಸೌಲಭ್ಯ ಒದಗಿಸಬಹುದು ಆ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಮುಂಡರಗಿ ತಾಲೂಕು ಒಂದು ಕಾಲದಲ್ಲಿ ಹಿಂದುಳಿದ ತಾಲೂಕಾಗಿತ್ತು. ಎಸ್. ಎಸ್. ಪಾಟೀಲರು ಸಚಿವರಾದ ಮೇಲೆ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಕರ್ನಾಟಕದಲ್ಲಿ ಈ ತಾಲೂಕು ಎಲ್ಲಿದೆ ಅಂತ ತೋರಿಸಿಕೊಟ್ಟವರು ಎಸ್.ಎಸ್. ಪಾಟೀಲರು, ಇಲ್ಲಿ ತುಂಗಭದ್ರೆ ಹರಿದಿದ್ದಾಳೆ. ಇಡೀ ತಾಲೂಕನ್ನು ನೀರಾವರಿ ಮಾಡಬೇಕಿತ್ತು. ನಾನು ನೀರಾವರಿ ಸಚಿವನಾಗಿದ್ದಾಗ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ 1 ಸಾವಿರ ಕೋಟಿ ರೂ. ಕೊಟ್ಟು ಯೋಜನೆಗೆ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದ್ದೇವೆ. ಬಲದಂಡೆ ಭಾಗದಲ್ಲಿ ಬಳ್ಳಾರಿ ಭಾಗದಲ್ಲಿ ಸಾಕಷ್ಟು ನೀರಾವರಿ ಆಗಿದೆ. ಸುಮಾರು 50 ಸಾವಿರ ಎಕರೆ ನೀರಾವರಿ ಆಗಿದೆ. ಮುಂಡರಗಿ ತಾಲೂಕಿನಲ್ಲಿ ಈ ಭಾಗದಲ್ಲಿ ಮೈಕ್ರೋ ಇರಿಗೇಷನ್ ಯೋಜನೆ ಮಾಡಿದರೂ, ಅದು ಬಹಳ ಮಂದಗತಿಯಲ್ಲಿ ನಡೆಯುತ್ತಿದೆ. ಮೇನ್ ಬ್ರಾಂಚ್ ಕೆನಾಲ್ ಕಾಮಗಾರಿ ಮುಗಿದರೂ ಹೊಲಗಳಿಗೆ ಕೊನೆ ಹಂತದ ರೈತರಿಗೆ ನೀರು ಬರುತ್ತಿಲ್ಲ. ಈಗಿನ ಸರ್ಕಾರ ಕೂಡಲೆ ಆಸಕ್ತಿ ವಹಿಸಿ ಮಾಡಬೇಕು ಎಂದು ಆಗ್ರಹಿಸಿದರು.
ಸಿಂಗಟಾಲೂರಿನ ನೀರಿನ ಹಂಚಿಕೆಯನ್ನು ನ್ಯಾಯಮಂಡಳಿಯಲ್ಲಿ ಸಂಪೂರ್ಣವಾಗಿ ದೃಢ ಪಡಿಸಿದ್ದೇವೆ.2004-05 ನೀರಿನ ಹಂಚಿಕೆ ಮಾಡಿರಲಿಲ್ಲ. ನಾನು ನೀರಾವರಿ ಸಚಿವನಾದ ಮೇಲೆ ನೀರಿ ಹಂಚಿಕೆ ದೃಢ ಪಡಿಸಿ, ನೀರಿನ ಪ್ರಮಾಣ ಹೆಚ್ಚಿಗೆ ಮಾಡಿದ್ದೇವೆ. ಹೀಗಾಗಿ ಈ ಭಾಗದಲ್ಲಿ ನೀರು ಕೊಡಲು ಸಾಧ್ಯವಾಗಿದೆ. ಇದರಿಂದ ಸುಮಾರು 18 ಟಿಎಂಸಿ ನೀರು ಕೊಡಲು ಸಾಧ್ಯವಾಗಿದೆ. ನಾನು ನೀರಾವರಿ ಸಚಿವನಾಗಿದ್ದಾಗ ಈ ಕೆಲಸ ಆಗಿದೆ. ಮೈಕ್ರೋ ಇರಿಗೇಷನ್ ಮಧ್ಯಪ್ರದೇಶದಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ. ಅದನ್ನು ಮುಂಡರಗಿ ತಾಲೂಕಿನಲ್ಲಿ ಜಾರಿಗೆ ತಂದರೆ ಎಲ್ಲ ರೈತರಿಗೂ ನೀರಾವರಿ ಒದಗಿಸಬಹುದು. ಈ ಬಗ್ಗೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದೇನೆ. ಈ ಏತ ನೀರಾವರಿಯನ್ನು ಬರುವಂತಹ ದಿನಗಳಲ್ಲಿ ಪೂರ್ಣಗೊಳಿಸಿ ರೈತರ ಹೊಲಕ್ಕೆ ನೀರು ಸಿಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂಡರಗಿ ತಾಲೂಕಿನ ಭೂಮಿ ತಾಯಿ ಹಸಿರು ಸೀರೆ ಉಡಬೇಕು ಎನ್ನುವುದು ನನ್ನ ಕನಸು ಅದನ್ನು ನನಸು ಮಾಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಗದಗ ಹರಪನಹಳ್ಳಿ ರೈಲ್ವೆ ಲೈನ್ ಬಗ್ಗೆ ಕೇಂದ್ರ ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಅದನ್ನು ವೇಗವಾಗಿ ಕೈಗೆತ್ತಿಕೊಂಡು ಪೂರ್ಣಗೊಳಿಸುವ ಕೆಲಸ ಮಾಡುತ್ತೇನೆ. ಬರುವಂತಹ ದಿನಗಳಲ್ಲಿ ಮುಂಡರಗಿ ತಾಲೂಕು ಅಭಿವೃದ್ಧಿ ಹೊಂದಿದ ತಾಲೂಕನ್ನಾಗಿ ಮಾಡಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.

