Mon. Dec 23rd, 2024

ಫೇಕ್ ಸುದ್ದಿ ಗಳಿಂದ ನೆಮ್ಮದಿ ಅಸಾಧ್ಯ-ಸಿದ್ದು ಆತಂಕ

Share this with Friends

ಮೈಸೂರು: ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ ಸಮಾಜದ ನೆಮ್ಮದಿ ಹಾಳಾಗುತ್ತದೆ ಜತೆಗೆ ಯಾರೂ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ನಂತರ ಪ್ರಶಸ್ತಿ ವಿತರಿಸಿ ಸಿಎಂ ಮಾತನಾಡಿದರು.

ವಾಕ್ ಸ್ವಾತಂತ್ರ್ಯ ನಮಗೆ ನಮ್ಮ‌ ಸಂವಿಧಾನ ನೀಡಿರುವ ಅತ್ಯುನ್ನತ ಮೌಲ್ಯ,
ಸಂವಿಧಾನದ ಮೂರು ಅಂಗಗಳಿಗೆ ಅಪಾಯ ಬಂದರೆ ಸಮಾಜಕ್ಕೆ ಅಪಾಯ ಬಂದಂತೆ ಎಂದು ಹೇಳಿದರು.

ವಾಕ್ ಸ್ವಾತಂತ್ರ್ಯ ಆಚರಿಸುವ ಪತ್ರಿಕಾ ರಂಗಕ್ಕೆ ಯಾವ ನಿರ್ಬಂಧಗಳೂ ಇರಬಾರದು ಎನ್ನುವುದನ್ನು ಪಂಡಿತ್ ನೆಹರೂ ಅವರು ಬಹಳ ಒತ್ತಿ ಹೇಳಿದ್ದರು ಎಂದು ಸ್ಮರಿಸಿದರು.

ಸಾಲ ಮನ್ನಾ ಮಾಡೋದಕ್ಕೆ ನಮ್ಮ ಬಳಿ ಪ್ರಿಂಟಿಂಗ್ ಮೆಷಿನ್ ಇದೆಯಾ ಎಂದು ಯಡಿಯೂರಪ್ಪ ಅವರು ಸದನದಲ್ಲೇ ಹೇಳಿದ್ದರು. ಈ ಮಾತನ್ನು ನಾನು ಉದಾಹರಿಸಿದ್ದೆ ಅಷ್ಟೇ. ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ನಾನೇ ಆ ಮಾತು ಹೇಳಿದ್ದಾಗಿ ಸುದ್ದಿ ಸೃಷ್ಟಿಸಿ, ಅದಕ್ಕೆ ಗ್ಯಾರಂಟಿ ಯೋಜನೆಗಳನ್ನು ಬೆರೆಸಿ ತಪ್ಪು ಸಂದೇಶ ಹರಡಿದರು ಸಿಎಂ ಎಂದು ಬೇಸರ ವ್ಯಕ್ತಪಡಿಸಿದರು.

ಫೇಕ್ ನ್ಯೂಸ್ ಸೃಷ್ಟಿಕರ್ತರಿಗೆ ಕಠಿಣ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ನಾವು ಕಾನೂನು ಮಾಡಿದ್ದೇವೆ. ಆದರೆ ಕೇವಲ ಕಾನೂನಿನಿಂದ ಮಾತ್ರ ಫೇಕ್ ನ್ಯೂಸ್ ತಡೆಯಲು ಸಾಧ್ಯವಿಲ್ಲ. ಇಡೀ ಸಮಾಜ ಇದರ ವಿರುದ್ಧ ಧ್ವನಿ ಎತ್ತಿದರೆ ಮಾತ್ರ ಸಾಧ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಚಿವ ಹೆಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಪ್ರಜಾವಾಣಿ ಪತ್ರಿಕೆ ಸಂಪಾದಕ ರವೀಂದ್ರ ಭಟ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಪುಷ್ಪಾ ಅಮರನಾಥ್, ಶಾಸಕರಾದ ರವಿಶಂಕರ್, ತನ್ವೀರ್ ಸೇಠ್, ನ್ಯೂಸ್ ಫಸ್ಟ್ ಸಿಇಒ ರವಿಕುಮಾರ್,
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್, ಕಾರ್ಯದರ್ಶಿ ರವಿ ಪಾಂಡವಪುರ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post