ಬೆಂಗಳೂರು,ಜು.25: ಎನ್ ಟಿ ಟಿ ಡೇಟಾ ಸಂಸ್ಥೆ,ಅಕ್ಷಯ ಪಾತ್ರ ಫೌಂಡೇಷನ್ ಸಹಯೋಗದೊಂದಿಗೆ 4.73 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರಿನ ಲಕ್ಷ್ಮೀಪುರದಲ್ಲಿ ನಿರ್ಮಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿದ್ದು ಇತರರಿಗೆ ಮಾದರಿಯಾಗಿದೆ
ಇತ್ತೀಚೆಗೆ ಈ ನೂತನ ಶಾಲಾ ಕಟ್ಟಡವನ್ನು ಎನ್ ಟಿಟಿ ಡೇಟಾ ಸಂಸ್ಥೆಯ ಡಿಜಿಟಲ್ ಅಧಿಕಾರಿ ದಿಲೀಪ್ ಕುಮಾರ್, ಅಕ್ಷಯ ಪಾತ್ರ ಫೌಂಡೇಷನ್ ನ ಸಿಇಒ ಶ್ರೀಧರ್ ವೆಂಕಟ್, ಶಾಸಕ ಎಸ್. ಮುನಿರಾಜು, ಮಾಜಿ ಕ್ರಿಕೆಟಿಗ ವಿಜಯ್ ಭಾರಧ್ವಜ್ ಲೋಕಾರ್ಪಣೆ ಗೊಳಿಸಿದರು.
ಈ ವೇಳೆ ಎನ್ ಟಿ ಟಿ ಡೇಟಾ ಸಂಸ್ಥೆಯ ಮುಖ್ಯ ಡಿಜಿಟಲ್ ಅಧಿಕಾರಿ ದಿಲೀಪ್ ಕುಮಾರ್ ಮಾತನಾಡಿ ಶಿಕ್ಷಣವು ಅವಕಾಶಗಳ ಬಾಗಿಲು ತೆರೆಯುವ ಕೀಲಿಕೈ ಇದ್ದಂತೆ ಎಂದು ಬಣ್ಣಿಸಿದರು.
ಅಕ್ಷಯ ಪಾತ್ರ ಫೌಂಡೇಷನ್ ಮತ್ತು ಎನ್ ಟಿ ಟಿ ಡೇಟಾ ಸಂಸ್ಥೆಗಳ ನಡುವಿನ ಈ ಸಹಯೋಗವು ಪ್ರತಿಯೊಂದು ಮಗುವಿಗೂ ಪರಿಸ್ಥಿತಿ ಗಳನ್ನು ಮೀರಿದ ಕನಸುಗಳನ್ನು ನನಸು ಮಾಡುವತ್ತ ಸಾಗುವ ಅವಕಾಶ ಒದಗಿಸಿದೆ ಎಂದು ತಿಳಿಸಿದರು.
ಅಕ್ಷಯ ಪಾತ್ರ ಫೌಂಡೇಷನ್ ನ ಸಿಇಒ ಶ್ರೀಧರ್ ವೆಂಕಟ್ ಮಾತನಾಡಿ ಸರ್ಕಾರಿ ಶಾಲಾ ಮಕ್ಕಳ ಕಲಿಕೆಯ ಸ್ಥಳವನ್ನು ಶ್ರೀಮಂತ ಗೊಳಿಸುವ ಮೂಲಕ ದೀರ್ಘ ಕಾಲದ ಸಾಮಾಜಿಕ ಪರಿಣಾಮ ಉಂಟು ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ನಾವು ಈ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಇದಕ್ಕೆ ಸಹಕರಿಸಿ, ನಮ್ಮೊಂದಿಗೆ ಕೈಜೋಡಿಸಿರುವ ಎನ್ ಟಿ ಟಿ ಡೇಟಾ ಸಂಸ್ಥೆಯ ಕಾರ್ಯಕ್ಕೆ ಕೃತಜ್ಞರಾಗಿದ್ದೇವೆ ಎಂದು ನುಡಿದರು.
ಶಾಸಕ ಎಸ್.ಮುನಿರಾಜು ಮಾತನಾಡಿ ಈ ಹಿಂದೆ ಲಕ್ಷ್ಮೀಪುರದ ಈ ಶಾಲೆ ಬಹಳ ಅವ್ಯವಸ್ಥೆಯಲ್ಲಿತ್ತು,ಇದನ್ನು ಮನಗಂಡು ಎನ್ ಟಿ ಟಿ ಡೇಟಾ ಮತ್ತು ಅಕ್ಷಯಪಾತ್ರ ಫೌಂಡೇಷನ್ ಸಂಸ್ಥೆಗಳು ಸಹಯೋಗ ವಹಿಸಿಕೊಂಡು ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಿಸಿ ಬಡಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮ ದಲ್ಲಿ ಇನ್ಫ್ರಾಸ್ಟ್ರಕ್ಚರ್ ಸರ್ವೀಸಸ್ ನ ಹಿರಿಯ ಉಪಾಧ್ಯಕ್ಷ ಆದಿತ್ಯ ಅಫ್ಜಲ್ಪುರ್ ಕರ್, ಎನ್ ಟಿ ಟಿ ಡೇಟಾ ಸಂಸ್ಥೆಯ ಉಪಾಧ್ಯಕ್ಷ ರವಿ ಕಲಗಟಕಿ, ಪ್ರಸಾದ್, ಬಿಇಒ ರಾಮಮೂರ್ತಿ ಬಿ.ಆರ್. ಮತ್ತಿತರರು ಹಾಜರಿದ್ದರು.
ಈ ಶಾಲೆಯಲ್ಲಿ 241 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಎನ್ ಟಿ ಟಿ ಡೇಟಾ ಸಂಸ್ಥೆಯ ಸಿಎಸ್ ಆರ್ ಅನುದಾನದಲ್ಲಿ 4.73 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡದಲ್ಲಿ 8 ತರಗತಿ ಕೊಠಡಿಗಳು, ಕಂಪ್ಯೂಟರ್ ಲ್ಯಾಬ್, ಲೈಬ್ರರಿ, ಮುಖ್ಯ ಶಿಕ್ಷಕ ಮತ್ತು ಸಹಶಿಕ್ಷಕರ ಕೊಠಡಿ, ಸಿಸಿ ಟಿವಿ, ಶೌಚಾಲಯ,ಧ್ವನಿವರ್ಧಕ ವ್ಯವಸ್ಥೆ ಹಾಗೂ ಆ್ಯಂಪಿ ಥಿಯೆಟರ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಹಾಗೂ ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿರುವುದು ವಿಶೇಷ.