Fri. Mar 6th, 2026

ಕೇರ್ ಲೆಸ್ ಆದ್ರೆ ಇನ್ಸೆಂಟಿವ್ ಕಟ್: ಆರೋಗ್ಯ ಇಲಾಖೆ ಸಿಬ್ಬಂದಿಗೆ ಶಾಕ್ ನೀಡಿದ ದಿನೇಶ್ ಗುಂಡೂರಾವ್

Share this with Friends

ಕಲಬುರಗಿ:ಸರ್ಕಾರ ನೀಡುತ್ತಿರುವ ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ಔಷಧಿಗಳು ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಕರ್ತವ್ಯ ಲೋಪವಾದರೆ ಅಂತಹ ಸಿಬ್ಬಂದಿಯ ಇನ್ಸೆಂಟಿವ್ ಕಡಿತಗೊಳಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಾಕೀತು ಮಾಡಿದ್ದಾರೆ.

ಕಲಬುರಗಿಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ದಿನೇಶ್ ಗುಂಡೂರಾವ್, ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು. ಜನರ ಮನೆಬಾಗಿಲಿಗೆ ಗುಣಮಟ್ಟದ ಚಿಕಿತ್ಸೆ ತಲುಪಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದರು.

ಈ ವೇಳೆ ಮಾತನಾಡಿದ ಸಚಿವರು,ತಾಲೂಕು ಆಸ್ಪತ್ರೆಗಳಲ್ಲಿ 24 ಗಂಟೆಯೂ ಪರಿಣಾಮಕಾರಿ ಸೇವೆ ದೊರೆಯಬೇಕೆಂಬುದು ನಮ್ಮ ಆಶಯ. ಇದಕ್ಕಾಗಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿರುವ ತಜ್ಞ ವೈದ್ಯರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಪುನರ್ ಸಂಘಟನೆ ಮಾಡಲಾಗುತ್ತಿದೆ. ತಾಲೂಕು ಮಟ್ಟದಲ್ಲಿಯೇ ಸ್ತ್ರೀ ರೋಗ, ಮಕ್ಕಳ ತಜ್ಞರು ಹಾಗೂ ಅರಿವಳಿಕೆ ತಜ್ಞರು ಲಭ್ಯವಿರುವಂತೆ ನೋಡಿಕೊಳ್ಳುವ ಮೂಲಕ ಜಿಲ್ಲಾ ಆಸ್ಪತ್ರೆಗಳ ಮೇಲಿನ ಹೊರೆಯನ್ನು ತಗ್ಗಿಸಲು ಸೂಚಿಸಿದ್ದೇನೆ ಎಂದರು.

ಸರ್ಕಾರ ನೀಡುತ್ತಿರುವ ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ಔಷಧಿಗಳು ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ಕರ್ತವ್ಯ ಲೋಪವಾದರೆ ಇನ್ಸೆಂಟಿವ್ ಕಡಿತಗೊಳಿಸುವಂತೆ ತಾಕೀತು ಮಾಡಿದ್ದೇನೆ. ಕೆಲಸ ಮಾಡುವವರಿಗೆ ಪ್ರೋತ್ಸಾಹ ಹಾಗೂ ಕರ್ತವ್ಯಲೋಪ ಎಸಗುವಂತವರಿಗೆ ಕಠಿಣ ಸಂದೇಶ ರವಾನಿಸುವುದು ಅನಿವಾರ್ಯವಾಗಿದೆ ಎಂದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ. ಕಳೆದ ವರ್ಷ ₹1,100 ಕೋಟಿ ಅನುದಾನದಲ್ಲಿ ಆಸ್ಪತ್ರೆಗಳ ಮೇಲ್ದರ್ಜೆ ಹಾಗೂ ಹೊಸ ಕೇಂದ್ರಗಳ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಇದರ ಜೊತೆಗೆ, ಆರೋಗ್ಯ ಇಲಾಖೆಗೆ ಬಲ ತುಂಬಲು ಮುಂದಿನ ಒಂದು ವಾರದಲ್ಲಿ 850 ಫಾರ್ಮಾಸಿಸ್ಟ್ ಹಾಗೂ ಟೆಕ್ನಿಶಿಯನ್‌ಗಳಿಗೆ ನೇಮಕಾತಿ ಪತ್ರ ವಿತರಿಸಲಾಗುವುದು. ಇದರಲ್ಲಿ ಸಿಂಹಪಾಲು ಈ ಭಾಗದ ಸೇವೆಗೆ ಲಭ್ಯವಾಗಲಿದ್ದಾರೆ ಎಂದರು.

ಯಾವ ಜಿಲ್ಲೆಗಳಲ್ಲಿ ಪ್ರತ್ಯೇಕ ಜಿಲ್ಲಾ ಆಸ್ಪತ್ರೆಗಳಿಲ್ಲವೋ ಅಂತಹ ಜಿಲ್ಲೆಗಳಲ್ಲಿ ಹೊಸ ಆಸ್ಪತ್ರೆ ನಿರ್ಮಿಸಲು ನಿರ್ಧರಿಸಿದ್ದೇವೆ. ಕಲಬುರಗಿ, ಕೊಪ್ಪಳ ಹಾಗೂ ಯಾದಗಿರಿಯಲ್ಲಿ ಹೊಸ ಜಿಲ್ಲಾ ಆಸ್ಪತ್ರೆಗಳ ಸ್ಥಾಪನೆ ಹಾಗೂ ಬಸವಕಲ್ಯಾಣ, ಸಿಂಧನೂರು ಆಸ್ಪತ್ರೆಗಳ ಮೇಲ್ದರ್ಜೆಗೇರಿಸುವ ಕಾರ್ಯ ಶೀಘ್ರವೇ ವೇಗ ಪಡೆಯಲಿದೆ. ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಜನರ ಆರೋಗ್ಯ ಸುಧಾರಣೆಗೆ ಬೇಕಾದ ಸರ್ವ ಕ್ರಮಗಳನ್ನು ಕೈಗೊಳ್ಳಲು ಮನದಟ್ಟು ಮಾಡಿಕೊಟ್ಟಿದ್ದೇನೆ ಎಂದರು.


Share this with Friends

Related Post