Wed. Dec 25th, 2024

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳ : ಪ್ಲೇಟ್’ಲೆಟ್’ಗಳ ಕೊರತೆ ಉಂಟಾಗದಂತೆ ಕ್ರಮವಹಿಸಲು ರಕ್ತಕೇಂದ್ರಗಳಿಗೆ ಸೂಚನೆ

Share this with Friends

ಬೆಂಗಳೂರು, ಜು.8: ರಾಜ್ಯದಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರೋಗಿಗಳಿಗೆ ರಕ್ತ, ಮತ್ತದರ ಅಂಗಾಂಶಗಳ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮವಹಿಸಲು ರಕ್ತಕೇಂದ್ರಗಳು ಹಾಗೂ ರಕ್ತ ಶೇಖರಣಾ ಘಟಕಗಳಿಗೆ ಸೂಚಿಸಲಾಗಿದೆ.

ಡೆಂಗ್ಯು, ಚಿಕನ್‌ಗುನ್ಯ ರೋಗಗಳ ಅಬ್ಬರದಿಂದ ರಾಜ್ಯದ್ಯಂತ ಎಲ್ಲಾ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಲ್ಲಿ ಒಳ ಹಾಗೂ ಹೊರರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ರೋಗಿಗಳಿಗೆ ಸಕಾಲದಲ್ಲಿ ರಕ್ತ ಮತ್ತು ಅದರ ಅಂಗಾಂಶಗಳ ಪೂರೈಕೆಯನ್ನು ಮಾಡ ಬೇಕಿದೆ.

ಆದ್ದರಿಂದ ಎಲ್ಲಾ ರಕ್ತಕೇಂದ್ರಗಳು ಹಾಗೂ ರಕ್ತ ಶೇಖರಣಾ ಘಟಕಗಳು ತಮ್ಮ ತಮ್ಮ ಕೇಂದ್ರಗಳಲ್ಲಿ ರಕ್ತ ಹಾಗೂ ಮತ್ತದರ ಅಂಗಾಂಶಗಳು ಅದರಲ್ಲೂ ಮುಖ್ಯವಾಗಿ ಪ್ಲೇಟ್‌ಲೆಟ್ ಗಳ ಕೊರತೆ ಕಾಣದಂತೆ ಅಗತ್ಯ ಕ್ರಮ ವಹಿಸಬೇಕೆಂದು ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ ಸೂಚಿಸಿದೆ.

ಕೆಲವು ರಕ್ತಕೇಂದ್ರಗಳು ರಕ್ತ ಮತ್ತದರ ಅಂಗಾಂಶಗಳ ದಾಖಲಾತಿಯನ್ನು ನಮೂದು ಮಾಡುತ್ತಿಲ್ಲದಿರುವುದು ಕಂಡುಬರುತ್ತಿದೆ. ಡಂಗ್ಯು ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ರಕ್ತ ಲಭ್ಯತೆಯ ಬಗ್ಗೆ ಸಿಗುವ ಏಕೈಕ ತತ್ರಾಂಶ ಒಂದೇ ಇರುವುದರಿಂದ ಸಾರ್ವಜನಿಕರಿಗೆ ಮಾಹಿತಿಯ ಕೊರತೆಯುಂಟಾಗಿ ಆಗುವ ಅನಾಹುತಗಳಿಗೆ ರಕ್ತಕೇಂದ್ರಗಳು ಕಾರಣವಾಗಬಾರದು.

ಆದ್ದರಿಂದ ಎಲ್ಲಾ ರಕ್ತಕೇಂದ್ರಗಳು ತಪ್ಪದೇ ರಕ್ತ ಮತ್ತು ಪ್ಲೇಟ್‌ಲೆಟ್‌ಗಳ ಕೊರತೆ ಕಾಣದಂತೆ ಕ್ರಮವಹಿಸುವುದರ ಜೊತೆಗೆ ಲಭ್ಯವಿರುವ ಮಾಹಿತಿಯನ್ನು E-Raktkoshನ ತತ್ರಾಂಶದಲ್ಲಿ ಪ್ರತಿದಿನ ನಮೂದಿಸುವಂತೆ ಆದೇಶಿಸಲಾಗಿದೆ.

ಪ್ರತಿದಿನ ಸಂಜೆ 4.30ಕ್ಕೆ ಮುಂಚೆ ನಿಗದಿತ ನಮೂನೆಯಲ್ಲಿ ಭರ್ತಿಮಾಡಿ ರಾಜ್ಯ ಶಾಖೆಗೆ ಸಲ್ಲಿಸಲು ಸೂಚಿಸಲಗಿದೆ. ಆದ್ದರಿಂದ ಡ್ಯಾಪ್ಟ ಅಧಿಕಾರಿಗಳು ತಮ್ಮ ಜಿಲ್ಲಾ ವ್ಯಾಪ್ತಿಗೆ ಬರುವ ರಕ್ತಕೇಂದ್ರಗಳು ಸದರಿ ವಿಷಯದ ಕಾರ್ಯವೈಕರಿಯ ಬಗ್ಗೆ ಗಮನವಹಿಸಿ ರಾಜ್ಯ ರಕ್ತಚಾಲನಾ ಪರಿಷತ್‌ ಗೆ ಪ್ರತಿದಿನ ವರದಿ ನೀಡಲು ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ ಆದೇಶಿಸಿದೆ.

ಇದಕ್ಕೆ ತಪ್ಪಿದ್ದಲ್ಲಿ ರಾಜ್ಯದಲ್ಲಿ ರಕ್ತ ಮತ್ತದರ ಅಂಗಾಂಶಗಳ ಕೊರತೆಯಿಂದ ಯಾವುದೇ ಅನಾಹುತದ ಪ್ರಕರಣಗಳು ಕಂಡುಬಂದಲ್ಲಿ ಸಂಬಂದಿಸಿದ ಪ್ರದೇಶದ ವ್ಯಾಪ್ತಿಗೆ ಬರುವ ರಕ್ತಕೇಂದ್ರ ಹಾಗೂ ಅಧಿಕಾರಿಗಳನ್ನೆ ಹೊಣೆಗಾರಿಕೆ ಮಾಡಲಾಗುವುದು ಎಂದು‌ ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ ಎಚ್ಚರಿಸಿದೆ.


Share this with Friends

Related Post