Tue. Dec 24th, 2024

ಸ್ವೀಪ್ ಚಟುವಟಿಕೆ ಮೂಲಕ ಮತದಾನ ಪ್ರಮಾಣ ಹೆಚ್ಚಿಸಿ: ಕೆ.ಎಂ.ಗಾಯಿತ್ರಿ ಸೂಚನೆ

Share this with Friends

ಮೈಸೂರು,ಮಾ.27: ಮತದಾರರಿಗೆ ಜಾಗೃತಿ ಮೂಡಿಸುವ ಮೂಲಕ ಮತದಾನದ ಶೇಖಡವಾರು ಪ್ರಮಾಣ ಹೆಚ್ಚಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಕೆ.ಎಂ.ಗಾಯಿತ್ರಿ ತಿಳಿಸಿದರು.

ಲೋಕಸಭಾ ಚುನಾವಣೆ ಪ್ರಯುಕ್ತ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಹಸ್ತಾಕ್ಷರ ಸಂಗ್ರಹ ಅಭಿಯಾನಕ್ಕೆ ಸಹಿ ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಎಲ್ಲಾ ಜನರಿಗೂ ಏಪ್ರಿಲ್ 26 ರಂದು ಮತದಾನ ಮಾಡುವಂತೆ ಅರಿವು ಮೂಡಿಸಬೇಕು. ಮತದಾನದ ಮಹತ್ವ ಕುರಿತು ಅವರಿಗೆ ಮನವರಿಕೆ ಮಾಡುವಂತಹ ಸ್ವೀಪ್ ಚಟುವಟಿಕೆ ನಡೆಸಬೇಕು ಎಂದು ಪಿಡಿಒ ಗಳಿಗೆ ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆಗಳಿಗೆ ಗುಣಮಟ್ಟದ ಮೂಲಭೂತ ಸೌಕರ್ಯವನ್ನು ಸಕಾಲಕ್ಕೆ ಒದಗಿಸಬೇಕು. ಪಿಡಿಒ ಗಳು ಮತಗಟ್ಟೆ ಅಧಿಕಾರಿಗಳ ಜೊತೆ ಚರ್ಚಿಸಿ ಅವರಿಗೆ ಅಗತ್ಯವಿರುವ ವಸ್ತುಗಳನ್ನು ನಿಗದಿತ ಸಮಯಕ್ಕೆ ಪೂರೈಸಲು ಕ್ರಮವಹಿಸಿ ಎಂದು ತಿಳಿಸಿದರು.

ಮತಗಟ್ಟೆ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ನೆರಳು, ಪ್ರಾಥಮಿಕ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಅಗತ್ಯ ಸೌಲಭ್ಯಕ್ಕಾಗಿ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಬೇಕು. ವಿಶ್ರಾಂತಿ ಕೊಠಡಿ ಮೀಸಲಿರಸಲು ಕ್ರಮವಹಿಸಬೇಕು. ವಿಷೇಶ ಮತಗಟ್ಟೆಯನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿ ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರೂ ಕಡ್ಡಾಯವಾಗಿ ಸಿ-ವಿಜಿಲ್ ಆಪ್ ಡೌನ್ಲೌಡ್ ಮಾಡಿಕೊಳ್ಳಬೇಕು. ಚುನಾವಣಾ ಅಕ್ರಮಗಳು ಕಂಡುಬಂದರೆ ಕೂಡಲೇ ಆಪ್ ಮೂಲಕ ದೂರು ಸಲ್ಲಿಸಿ ಎಂದು ಹೇಳಿದರು.

ಚುನಾವಣೆ ಸಿದ್ದತೆಯ ಜೊತೆಗೆ ಬರಗಾಲ ಅನೇಕ ಗ್ರಾಮಗಳನ್ನು ವ್ಯಾಪ್ತಿಸಿದ್ದು, ಸಮರ್ಪಕ ಕುಡಿಯುವ ನೀರು ಪೂರೈಸಲು ನಿಗಾವಹಿಸಿ ಕೆಲಸ ಮಾಡಬೇಕು. ನರೇಗಾ ಯೋಜನೆಯಡಿ ಹೆಚ್ಚಿನ ಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ಗುಳೆ ಹೋಗುವುದನ್ನು ತಡೆಗಟ್ಟಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಸ್ವೀಪ್ ನೋಡಲ್ ಅಧಿಕಾರಿ ಶಾಂತ.ಎಂ,
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಧರಣೇಶ್, ತಾ.ಪಂ. ಸಹಾಯಕ ನಿರ್ದೇಶಕಿ ಭವ್ಯ, ಗಂಗಾಧರ ಮತ್ತಿತರ ಅಧಿಕಾರಿಗಳು ಹಾಜರಿದ್ದರು.


Share this with Friends

Related Post