ಬೆಂಗಳೂರು,ಫೆ.22: ಹಿಂದೂ ದೇವಾಲಯ, ಧಾರ್ಮಿಕ ಸಂಸ್ಥೆಗಳಿಗೆ ಕಾಂಗ್ರೆಸ್ ಸರ್ಕಾರ ತುಂಬಾ ಅನ್ಯಾಯ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಾಪ್ರಹಾರ ನಡೆಸಿದರು.
ಪ್ರತಿ ಇಲಾಖೆಗಳಲ್ಲಿ ಅಭಿವೃದ್ಧಿಗಾಗಿ ಹಣ ಖರ್ಚಾಗದೆ ಬಾಕಿ ಉಳಿದಿದೆ, ಸಿಎಂ ಸಿದ್ದರಾಮಯ್ಯನವರ 15 ನೇ ಬಜೆಟ್ ಒಡೆದ ಕನ್ನಡಿಯಂತಿದೆ, ಬಡವರ ವಿರೋಧಿಯಾಗಿದೆ, ಹಿಂದೂಗಳಿಗೆ ದ್ರೋಹ ಬಗೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಚರ್ಚೆ ವೇಳೆ ಮಾತನಾಡುತ್ತಿದ್ದ ಅವರು, ಬಿಜೆಪಿ ಸರ್ಕಾರವಿದ್ದಾಗ ದೇವಾಲಯ ಮತ್ತು ಧಾರ್ಮಿಕ ಸಂಸ್ಥೆಗಳಿಗೆ 274 ಕೋಟಿ ರೂ. ಖರ್ಚು ಮಾಡಲಾಗಿತ್ತು, ಜೊತೆಗೆ ಸಿಎಂ ವಿಶೇಷ ಅನುದಾನದಡಿ, ಮಠ ಹಾಗೂ ದೇವಾಲಯಗಳಿಗೆ 2022-23 ರಲ್ಲಿ 154.80 ಕೋಟಿ ರೂ. ಖರ್ಚು ಮಾಡಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಕೇವಲ 17 ಕೋಟಿ ರೂ. ಮೀಸಲಿಟ್ಟಿದೆ ಎಂದು ಕಿಡಿಕಾರಿದರು.
ಅದೇ ವಕ್ಫ್ ಮಂಡಳಿಗೆ 100 ಕೋಟಿ ರೂ. ಅನುದಾನ ನೀಡಲಾಗಿದೆ. ಒಬ್ಬರು ರಾಮ ನನ್ನ ಹೆಸರಿನಲ್ಲಿದೆ ಎಂದರೆ, ಮತ್ತೊಬ್ಬರು ಶಿವ ನನ್ನ ಹೆಸರಲ್ಲಿದೆ ಎನ್ನುತ್ತಾರೆ ಎಂದು ಅಶೋಕ್ ವ್ಯಂಗ್ಯವಾಡಿದರು.
ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ 24.7 ಕೋಟಿ ರೂ. ಖರ್ಚು ಮಾಡಿದ್ದು, ಈಗಿನ ಸರ್ಕಾರ 10 ಕೋಟಿ ರೂ. ಮೀಸಲಿಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಸಾರಿಗೆ ಸಚಿವನಾಗಿದ್ದಾಗ 1,200 ಎಕರೆ ಸರ್ಕಾರಿ ಜಮೀನನ್ನು ಹರಾಜು ಹಾಕುವುದನ್ನು ತಪ್ಪಿಸಿ ಸಾರಿಗೆ ಇಲಾಖೆಗೆ ಕೊಡಲು ಕ್ರಮ ವಹಿಸಿ ಯಶಸ್ವಿಯಾಗಿದ್ದೆ.ಹಾಗೆಯೇ ನೀವೂ ಕೂಡಾ ಸರ್ಕಾರಿ ಜಮೀನನ್ನು ಉಳಿಸಲು ಕ್ರಮ ವಹಿಸಿ ಎಂದು ಸಲಹೆ ನೀಡಿದರು.
ತೆರಿಗೆ ಸಂಗ್ರಹ ಇಳಿಕೆಯಾಗಿದೆ ಎಂದು ಅಂಕಿ,ಅಂಶಗಳ ಸಹಿತ ವಿವರಿಸಿದ ಅಶೋಕ್,ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಿಯಾಗಿ 15 ನೇ ಬಜೆಟ್‌ಗೆ ಸಾಲದ ಮೊತ್ತವನ್ನು 1 ಲಕ್ಷ ಕೋಟಿ ರೂ. ತಲುಪಿಸಿದ್ದಾರೆ ಎಂದು ಟೀಕಿಸಿ,ಕೇಂದ್ರ ಸರ್ಕಾರದ ಅನುದಾನದ ವಿವರ ನೀಡಿದರು.