Mon. Dec 23rd, 2024

ಚಾಮುಂಡಿ ಬೆಟ್ಟ ಪಾದದಲ್ಲಿ ಮೂಕ ಪ್ರಾಣಿ ಪಕ್ಷಿಗಳಿಗೆ ನೀರಿನ ತೊಟ್ಟಿ ಅಳವಡಿಕೆ

Share this with Friends

ಮೈಸೂರು, ಮೇ.4: ಮೈಸೂರಿನ ಚಾಮುಂಡಿ ಬೆಟ್ಟದ ಪಾದದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಮತ್ತು ಸೈನಿಕ ಅಕಾಡೆಮಿ‌ ವತಿಯಿಂದ ನೀರಿನ ತೊಟ್ಟಿ ಅಳವಡಿಸಲಾಯಿತು.

ಬಿಸಿಲ ಬೇಗೆಯಿಂದ ಬಸವಳಿದಿರುವ ಪ್ರಾಣಿ ಪಕ್ಷಿಗಳು, ಜಾನುವಾರುಗಳಿಗೆ ನೀರು ಕುಡಿಯುಲು ಶನಿವಾರ ಬೆಳಿಗ್ಗೆ ತೊಟ್ಟಿಗಳನ್ನು ಇಡಲಾಯಿತು.

ದನ, ಕರುಗಳು, ಕೋತಿ,ಸಣ್ಣ,ಪುಟ್ಟ ಪ್ರಾಣಿ–ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲವಾಗುವಂತೆ ನೀರಿನ ತೊಟ್ಟಿಗಳನ್ನು ಅಳವಡಿಸಲಾಯಿತು.

ಈ ವೇಳೆ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅವರು,
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನಿಂದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ,ಇನ್ನು ಮೂಕ ಪ್ರಾಣಿಗಳ ಸ್ಥಿತಿ ಹೇಳಲಾಗದು,ಇದನ್ನು ಅರಿತು ಕುಡಿಯುವ ನೀರಿನ ತೊಟ್ಟಿಗಳನ್ನು ಅಳವಡಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಸ್ತುತ ದಿನಗಳಲ್ಲಿ ನಾನು, ನನ್ನದು ಎಂದು ಬಡಿದಾಡುವವರ ಮಧ್ಯೆ ಪ್ರಾಣಿ ಪಕ್ಷಿಗಳ ನೆರವಿಗೆ ಧಾವಿಸುತ್ತಿರುವ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ ಎಂದರು.

ಸೈನಿಕ ಅಕಾಡೆಮಿ ಮೈಸೂರಿನ ಸಂಸ್ಥಾಪಕರೂ ಮಾಜಿ ಕಮಾಂಡೋ ಶ್ರೀಧರ್ ಸಿ. ಎಂ. ಮಾತನಾಡಿ,
ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ, ಅವುಗಳು ಆಹಾರಕ್ಕಾಗಿ ನಾಡಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅಭಿವೃದ್ಧಿಯ ನೆಪದಲ್ಲಿ ಪರಿಸರ ಸಂರಕ್ಷಣೆ ಕಡಿಮೆಯಾಗುತ್ತಿದೆ. ಹವಾಮಾನ ವೈಪರಿತ್ಯಕ್ಕೂ ಪರಿಸರ ಸಂರಕ್ಷಣೆಯ ವೈಫಲ್ಯ ಕಾರಣವಾಗಿದೆ ಎಂದು ಹೇಳಿದರು.

ಮೈಸೂರು ನಗರ ಜೆಡಿಎಸ್ ಕಾರ್ಯಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಜೆಡಿಎಸ್ ನಗರ ಉಪಾಧ್ಯಕ್ಷ ಯದು ನಂದನ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಬೈರತಿ ಲಿಂಗರಾಜು, ಸಮಾಜ ಸೇವಕರಾದ ಸವಿತಾ ಘಾಟ್ಕೆ, ನಾಗಶ್ರೀ ಸುಚಿಂದ್ರ, ಸೈನಿಕರು ಹಾಗೂ ಸೈನಿಕ ಅಕಾಡೆಮಿಯ ತರಬೇತಿ ಪಡೆಯುತ್ತಿರುವ ಮಕ್ಕಳು ಹಾಜರಿದ್ದರು.


Share this with Friends

Related Post