ಬೆಂಗಳೂರು, ಮಾ.1: ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಸಾರಿಗೆ ಬಸ್ ಗಳನ್ನು ಕಾರ್ಯಾಚರಣೆಗೊಳಿಸುವಂತೆ ಕೆ ಎಸ್ ಆರ್ ಟಿ ಸಿ ಎಲ್ಲಾ ಹಿರಿಯ,ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಲಾಗಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಮನವಿ ಮೇರೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೂಕ್ತ ಸಾರಿಗೆ ವ್ಯವಸ್ಥೆ ಮಾಡುವಂತೆ ಆದೇಶಿಸಿದ್ದಾರೆ.
ರಾಜ್ಯಾದ್ಯಂತ 2023- 24ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಗಳು ಮಾ.1 ರಿಂದ 22 ರವರೆಗೆ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ನಡೆಯಲಿದೆ.
ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಪರೀಕ್ಷಾ ಸಮಯಕ್ಕೆ ಅನುಗುಣವಾಗಿ ಅಗತ್ಯ ಸಂಖ್ಯೆಯ ಬಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಸಾರಿಗೆ ಸಚಿವರಿಗೆ ಶಿಕ್ಷಣ ಸಚಿವರು ಮನವಿ ಪತ್ರ ಸಲ್ಲಿಸಿದ್ದರು.
ಈ ಮನವಿಗೆ ಸ್ಪಂದಿಸಿ ರಾಮಲಿಂಗಾರೆಡ್ಡಿ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ತೊಂದರೆ ಆಗದಂತೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಕ್ರಮ ವಹಿಸಲು ಕೆ ಎಸ್ ಆರ್ ಟಿ ಸಿ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅದರಂತೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಯಾವುದೇ ಅಡಚಣೆಯಾಗದಂತೆ ಪರೀಕ್ಷಾ ದಿನಗಳಂದು ವಿಭಾಗದ ವತಿಯಿಂದ ಎಲ್ಲಾ ಸಾರಿಗೆಗಳನ್ನು ಸಮರ್ಪಕವಾಗಿ ಕಾರ್ಯಚರಣೆ ಮಾಡುವಂತೆ ಮತ್ತು ಪ್ರಮುಖ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಿಂದ ಪರೀಕ್ಷೆ ನಡೆಯುವ ಕೇಂದ್ರಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲು ಕ್ರಮಕೈಗೊಳ್ಳುವಂತೆ ಮುಖ್ಯ ಸಂಚಾರ ವ್ಯವಸ್ಥಾಪಕರು ಸೂಚಿಸಿದ್ದಾರೆ.