ಮೈಸೂರು, ಮೇ 1: ಐಪಿಎಲ್ ಬೆಟ್ಟಿಂಗ್ ಗಾಗಿ ಮಾಡಿದ್ದ ಸಾಲ ತೀರಿಸಲು ಬೈಕ್ ಕಳ್ಳತನಕ್ಕೆ ಇಳಿದಿದ್ದ ಸಿವಿಲ್ ಇಂಜಿನಿಯರ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮೈಸೂರು ಕುವೆಂಪುನಗರ ಠಾಣೆ ಪೊಲೀಸರು ಮಂಡ್ಯ ಜಿಲ್ಲೆ ಗೆಂಡೆಕೊಪ್ಪಲು ಗ್ರಾಮದ ಕೇಶವ (26) ಎಂಬಾತನನ್ನು ಬಂಧಿಸಿ ಆತ ಕಳವು ಮಾಡಿದ್ದ
ಎರಡು ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ
ಬಿಇ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಕೇಶವ ಕಳೆದ ಮೂರು ವರ್ಷಗಳಿಂದ ಐಪಿಎಲ್ ಬೆಟ್ಟಿಂಗ್ ದಂಧೆಗೆ ಇಳಿದು 3 ಲಕ್ಷ ರೂ ಕಳೆದುಕೊಂಡಿದ್ದ.
ಸಾಲ ತೀರಿಸಲು ಬೈಕ್ ಕಳ್ಳತನಕ್ಕೆ ಇಳಿದಿದ್ದ ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಹಿಂದೆ ಈತ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನ ಕಳುವು ಮಾಡಿದ್ದು, 8 ಪ್ರಕರಣಗಳು ದಾಖಲಾಗಿವೆ.
ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಕೆಆರ್ ವಿಭಾಗದ ಎಸಿಪಿ ರಮೇಶ್ ಕುಮಾರ್ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ಇನ್ಸ್ ಪೆಕ್ಟರ್ ಯೋಗೇಶ್ ಹಾಗೂ ಪಿಎಸ್ಸೈ ಗೋಪಾಲ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಂಜುನಾಥ್,ಆನಂದ್,ಹಜರತ್ ಆಲಿ,ಸುರೇಶ್ ಹಾಗೂ ನಾಗೇಶ್ ಕಾರ್ಯಾಚರಣೆ ನಡೆಸಿದ್ದರು
ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಈ ಕಾರ್ಯಾಚರಣೆಯನ್ನ ಶ್ಲಾಘಿಸಿದ್ದಾರೆ.