Sat. Nov 2nd, 2024

ತೆರಿಗೆ ಭಯೋತ್ಪಾದನೆ ಯಿಂದ ಕಾಂಗ್ರೆಸ್ ಮಣಿಸಬಹುದೆಂದರೆ ಅದು ಭ್ರಮೆ:ಸಿಎಂ

Share this with Friends

ಬೆಂಗಳೂರು, ಮಾ.30: ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಬಿಜೆಪಿ ಐಟಿ, ಇಡಿ, ಸಿಬಿಐ ಮೊದಲಾದ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಣಿಯಲು ಹೊರಟಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಹುನ್ನಾರದ ಭಾಗವಾಗಿಯೇ ನಮ್ಮ ಪಕ್ಷದ ವಿರುದ್ದ ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ. ಈ ರೀತಿ ನಮ್ಮ ಪಕ್ಷವನ್ನು ದುರ್ಬಲಗೊಳಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದೆಂದು ಬಿಜೆಪಿ ತಿಳಿದುಕೊಂಡಿದ್ದರೆ ಅದು ಆ ಪಕ್ಷದ ಭ್ರಮೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಮೇಲೆ ವರಮಾನ ತೆರಿಗೆ ಪಾವತಿ ಮಾಡದೆ ಇರುವ ಆರೋಪ ಹೊರಿಸಿ 1823 ಕೋಟಿ ಪಾವತಿಸುವಂತೆ ಐಟಿ ಇಲಾಖೆ ನೋಟೀಸ್ ನೀಡಿದೆ. 2017-18ರಲ್ಲಿ ಬಿಜೆಪಿ ಹೆಸರೇ ಇಲ್ಲದ 92 ದಾನಿಗಳಿಂದ 4.5 ಲಕ್ಷ ಮತ್ತು ವಿಳಾಸವೇ ಇಲ್ಲದ 1297 ದಾನಿಗಳಿಂದ 42 ಕೋಟಿ ದೇಣಿಗೆ ಪಡೆದಿರುವುದನ್ನು ನಮ್ಮ ಪಕ್ಷದ ನಾಯಕರು ಬಯಲಿಗೆಳೆದಿದ್ದಾರೆ. ನಮ್ಮ ಪಕ್ಷಕ್ಕೆ ಅನ್ವಯಿಸಿದ ಮಾನದಂಡವನ್ನೇ ಅನ್ವಯಿಸಿದರೆ ಬಿಜೆಪಿ ಕಳೆದ ಏಳು ವರ್ಷಗಳಲ್ಲಿ ನಡೆಸಿರುವ ತೆರಿಗೆ ಉಲ್ಲಂಘನೆಗಾಗಿ ರೂ.4263 ಕೋಟಿ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅತಿಕ್ರಿಯಾಶಾಲಿಯಾಗಿರುವ ಐಟಿ ಇಲಾಖೆ ಟಿಎಂಸಿ, ಸಿಪಿಐ ಸೇರಿದಂತೆ ಬೇರೆ ವಿರೋಧಪಕ್ಷಗಳ ಮೇಲೆಯೂ ತೆರಿಗೆ ಭಯೋತ್ಪಾದನೆಯ ಅಸ್ತ್ರ ಪ್ರಯೋಗ ಮಾಡಿದೆ. ವಿರೋಧ ಪಕ್ಷಗಳ ಮೇಲೆ ಮುಗಿ ಬಿದ್ದಿರುವ ಐಟಿ ಇಲಾಖೆ ಬಿಜೆಪಿಯ ತೆರಿಗೆ ಉಲ್ಲಂಘನೆ ಬಗ್ಗೆ ಮಾತ್ರ ಕುರುಡಾಗಿದೆ. ಐಟಿ ಇಲಾಖೆಯ ಕಣ್ಣಿಗೆ ಬಟ್ಟೆ ಕಟ್ಟಿರುವವರು ಯಾರು ಎನ್ನುವುದನ್ನು ತಿಳಿಯದಷ್ಟು ದೇಶದ ಜನತೆ ದಡ್ಡರಲ್ಲ ಎಂದಿದ್ದಾರೆ ಸಿಎಂ.

ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಡೈರಿಗಳೆಂದು ಹೇಳಲಾದ ದಾಖಲೆಪತ್ರಗಳನ್ನು ಮುಂದಿಟ್ಟುಕೊಂಡು ತೆರಿಗೆ ಉಲ್ಲಂಘನೆಯ ಆರೋಪ ಮಾಡುತ್ತಿರುವ ಐಟಿ ಇಲಾಖೆಗೆ, ಕರ್ನಾಟಕದಲ್ಲಿಯೇ ಬಯಲಾಗಿದ್ದ ಯಡಿಯೂರಪ್ಪ ಡೈರಿಗಳಾಗಲಿ, ನರೇಂದ್ರಮೋದಿಯವರೂ ಫಲಾನುಭವಿ ಎಂದು ಆರೋಪಿಸಲಾಗಿರುವ ಬಿರ್ಲಾ-ಸಹಾರಾ ಡೈರಿಯಾಗಲಿ ಯಾಕೆ ಕಣ್ಣಿಗೆ ಬಿದ್ದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಐಟಿ, ಇಡಿ ಮತ್ತು ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಚುನಾವಣಾ ಬಾಂಡ್ ಗಳ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಆಡಳಿತಾರೂಡ ಬಿಜೆಪಿ ಸುಲಿಗೆ ಮಾಡಿರುವುದು ಜಗಜ್ಜಾಹೀರಾಗಿದೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ವಿಜಯ್ ಮಲ್ಯ, ನೀರವ್ ಮೋದಿ ಮೊದಲಾದ ಬ್ಯಾಂಕ್ ವಂಚಕರ 10.09 ಲಕ್ಷ ಕೋಟಿ ರೂಪಾಯಿಯಷ್ಟು ಬ್ಯಾಂಕ್ ಸಾಲವನ್ನು‌ ಮನ್ನಾ ಮಾಡಿರುವ ಬಿಜೆಪಿ ಸರ್ಕಾರ ಅವರಿಂದ ಪಡೆದಿರುವ ಕಮಿಷನ್ ಹಣ ಎಷ್ಟು ಎನ್ನುವುದನ್ನು ದೇಶದ ಜನತೆಗೆ ತಿಳಿಸಬೇಕಿದೆ.

ಬಿಜೆಪಿ ಅಂದ್ರೆ ಭ್ರಷ್ಟರ ಹಣವನ್ನು ನುಂಗಿ ಅವರಿಗೆ ಪ್ರಾಮಾಣಿಕತೆಯ ಸರ್ಟಿಫಿಕೇಟ್ ನೀಡುವ ವಾಷಿಂಗ್‌ ಮೆಶಿನ್‌ ಆಗಿದೆ. ಭ್ರಷ್ಟರು ತಾವು ಮಾಡಿದ ಮಹಾಪಾಪಗಳ ಮೇಲಿನ ತನಿಖೆಯಿಂದ ತಪ್ಪಿಸಿಕೊಳ್ಳಬೇಕಾದರೆ, ಶಿಕ್ಷೆಯಿಂದ ಪಾರಾಗಬೇಕಾದರೆ ಬಿಜೆಪಿ ಸೇರಿಕೊಂಡರೆ ಸಾಕು, ಪಾಪಗಳೆಲ್ಲವೂ ತನ್ನಿಂತಾನೆ ಶುದ್ಧವಾಗುತ್ತದೆ. ಅಲ್ಲಿದ್ದುಕೊಂಡು ಎಷ್ಟು ಬೇಕಾದರೂ ಭ್ರಷ್ಟಾಚಾರ ಮಾಡಬಹುದು, ಜನರ ಹಣ ಲೂಟಿ ಮಾಡಬಹುದು,ಅವರ ಮೇಲೆ ಯಾವ ಕೇಸೂ ದಾಖಲಾಗುವುದಿಲ್ಲ, ಯಾವ ತನಿಖಾ ಸಂಸ್ಥೆಯೂ ಹುಡುಕೊಂಡು ಬರುವುದಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.


Share this with Friends

Related Post