ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆಗೆ ಗ್ರಾಸವಾಗಿರುವ ನಾಯಕತ್ವ ಬದಲಾವಣೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ವಾಗತಿಸಿದ್ದಾರೆ. “ನಾಯಕತ್ವದ ಗೊಂದಲಗಳನ್ನು ಮಲ್ಲಿಕಾರ್ಜುನ ಖರ್ಗೆ ಅವರು ಬಗೆಹರಿಸಲಿದ್ದಾರೆ ಎಂದು ಜಾರಕಿಹೊಳಿ ಹೇಳಿರುವುದು ಬಹಳ ಸಂತೋಷದ ವಿಷಯ” ಎಂದು ಶಿವಕುಮಾರ್ ಮಾರ್ಮಿಕವಾಗಿ ನುಡಿದರು.
ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಪಾಳಯದಲ್ಲಿ ಕೇಳಿಬರುತ್ತಿರುವ ನಾಯಕತ್ವ ಬದಲಾವಣೆಯ ಗುಸುಗುಸು ಕುರಿತು ಶನಿವಾರ ಸ್ಪಷ್ಟನೆ ನೀಡಿದ್ದ ಸತೀಶ್ ಜಾರಕಿಹೊಳಿ, “ದೆಹಲಿ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಮಲ್ಲಿಕಾರ್ಜುನ ಖರ್ಗೆ ಅವರು ಭರವಸೆ ನೀಡಿದ್ದು, ಶೀಘ್ರದಲ್ಲೇ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ,” ಎಂದಿದ್ದರು. ಈ ಬೆಳವಣಿಗೆಯ ಬಗ್ಗೆ ಮಾಧ್ಯಮಗಳು ಉನ್ನತ ಶಿಕ್ಷಣ ಪರಿಷತ್ ಬಳಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದಾಗ, ಅವರು ಹೆಚ್ಚಿನ ವಿವರ ನೀಡದೆ ಕೇವಲ ‘ಸಂತೋಷ’ ಎನ್ನುವ ಮೂಲಕ ನಾಯಕತ್ವದ ಚರ್ಚೆಯನ್ನು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟ ಸುಳಿವು ನೀಡಿದರು.
ಮಾಹಿತಿ ಇಲ್ಲ ಎಂದ ಡಿಸಿಎಂ:
ಇದೇ ವೇಳೆ ಮುಖ್ಯಮಂತ್ರಿಯವರ ಲೇಖನ ಹಾಗೂ ಟ್ವಿಟರ್ ಪೋಸ್ಟ್ ಕುರಿತು ಕೇಳಲಾದ ಪ್ರಶ್ನೆಗೆ, “ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ” ಎಂದು ಉತ್ತರಿಸಿದರು. ಅಲ್ಲದೆ, ಬಾಗಲಕೋಟೆ ಗಲಭೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, “ಅಸ್ಸಾಂ ಪ್ರವಾಸ ಮುಗಿಸಿ ತಡರಾತ್ರಿ ನಗರಕ್ಕೆ ಮರಳಿದ್ದೇನೆ. ಸತತ ಸಭೆಗಳಿಂದ ಆಯಾಸವಾಗಿದೆ, ಘಟನೆಯ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ” ಎಂದರು.
ವರದಿ ಬಳಿಕ ಪರಿಹಾರ ನಿರ್ಧಾರ:
ಗಲಭೆ ಪೀಡಿತ ಪ್ರದೇಶಕ್ಕೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿರುವ ಬಗ್ಗೆ ಹಾಗೂ ಸಂತ್ರಸ್ತರಿಗೆ ಪರಿಹಾರ ಘೋಷಿಸುವ ಕುರಿತು ಉತ್ತರಿಸಿದ ಅವರು, ಅಧಿಕಾರಿಗಳ ವರದಿ ಬಂದ ನಂತರ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು. ಇನ್ನು ಸಿಎಂ ಅವರ ಲೇಖನ ಹಾಗೂ ಶಾಸಕ ಧೀರಜ್ ಮುನಿರಾಜು ಅವರ ಅನುದಾನದ ಕುರಿತಾದ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, “ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸೋಣ” ಎಂದರು.

