Fri. Dec 27th, 2024

ರಾಜ್ಯ ಮಹಿಳಾ ಆಯೋಗದ ವಿರುದ್ಧ ಜೆಡಿಎಸ್ ಅಸಮಾಧಾನ

Share this with Friends

ಬೆಂಗಳೂರು, ಏ.18: ರಾಜ್ಯ ಮಹಿಳಾ ಆಯೋಗದ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ವಿದ್ಯುತ್ ವೇಗದಲ್ಲಿ ಕೆಲಸ ಮಾಡಿದ ರಾಜ್ಯ ಮಹಿಳಾ ಆಯೋಗ, ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸಲು ಆಮೆ ವೇಗಕ್ಕೆ ಶರಣಾಗಿದೆ ಎಂದು ಟೀಕಿಸಿದೆ.

ಕುಮಾರಸ್ವಾಮಿ ಅವರ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿ ಉತ್ಸಾಹದಿಂದ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟ ಮಹಿಳಾ ಆಯೋಗದ ಅಧ್ಯಕ್ಷರು,ಹಿರಿಯ ನಟಿ ಹಾಗೂ ಸಂಸದರಾದ ಹೇಮಾಮಾಲಿನಿ ಅವರ ಬಗ್ಗೆ ಅತ್ಯಂತ ನೀಚ, ನಿಕೃಷ್ಟ ಹೇಳಿಕೆ ಕೊಟ್ಟ ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೆವಾಲ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಕುಟುಕಿದೆ.

ಮಹಿಳೆಯರು ಅಡುಗೆ ಮನೆಗೇ ಲಾಯಕ್ಕು ಎನ್ನುವ ಮೂಲಕ ನಾರಿಶಕ್ತಿಯನ್ನು ತುಚ್ಛವಾಗಿ ಕಂಡಿದ್ದ ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಜಾಣಮೌನ ವಹಿಸಿದೆ.

ಮಹಿಳಾ ಆಯೋಗದಲ್ಲಿ ಪಕ್ಷಗಳವಾರು ನೀತಿ ನಿಯಮಗಳೇನಾದರೂ ಇವೆಯೇ, ಏಕೆಂದರೆ ರಂದೀಪ್ ಸುರ್ಜೆವಾಲ, ಶಾಮನೂರು ಶಿವಶಂಕರಪ್ಪ ಅವರಿಬ್ಬರ ವಿರುದ್ಧ ಮಹಿಳೆಯರೇ ದೂರು ನೀಡಿ ನಾಲ್ಕು ದಿನಗಳು ಕಳೆದರೂ ಕ್ರಮದ ಮಾತಿರಲಿ ಪ್ರಕರಣವನ್ನೇ ದಾಖಲಿಸಿಲ್ಲ ಇದೆಂಥಾ ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಕೂಡಲೇ ಈ ಇಬ್ಬರೂ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು, ಮಹಿಳಾ ಆಯೋಗ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜೆಡಿಎಸ್ ಬಯಸುತ್ತದೆ ಎಂದು ಟ್ವಿಟ್ ಮಾಡಿದೆ.


Share this with Friends

Related Post