Sun. Dec 22nd, 2024

ಬಾಲಕಾರ್ಮಿಕ ಮುಕ್ತ ಜಿಲ್ಲೆಯಾಗಿಸಲು ಕೈ ಜೋಡಿಸಿ-ಜಿ. ಲಕ್ಷ್ಮೀಕಾಂತ ರೆಡ್ಡಿ ಕರೆ

Share this with Friends

ಮೈಸೂರು: ಬಾಲ ಕಾರ್ಮಿಕ ಮತ್ತು ಕಿಶೋರಕಾರ್ಮಿಕ ಕಾಯ್ದೆಯನ್ವಯ ನೇಮಕಗೊಂಡಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮೈಸೂರು ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯಾಗಿಸಲು ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೈಸೂರು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ಹಾಗೂ ಕಾರ್ಯ ಪಡೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಗ್ಯಾರೇಜುಗಳು, ಗುಜರಿ, ಕಸ ವಿಲೇವಾರಿ ಘಟಕ ಮುಂತಾದ ಬಾಲ/ಕಿಶೋರ ಕಾರ್ಮಿಕರು ಹೆಚ್ಚಾಗಿ ಕಂಡುಬರುವಂತಹ ಸ್ಥಳಗಳಲ್ಲಿ ಹೆಚ್ಚು ತಪಾಸಣೆ ನಡೆಸಿ ದುಡಿಮೆಯಲ್ಲಿ ತೊಡಗಿರುವ ಬಾಲ ಮತ್ತು ಕಿಶೋರ ಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.

ವಲಸೆ ಕಾರ್ಮಿಕರ ಜೊತೆ ಬಂದಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುತ್ತಾರೆ. ಅಂತಹ ಮಕ್ಕಳು ಶಿಕ್ಷಣ ಪಡೆಯುವ ಸಲುವಾಗಿ ಕಾರ್ಮಿಕ ಇಲಾಖೆಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು ಸಹಭಾಗಿತ್ವ ವಹಿಸಿ ಮಕ್ಕಳನ್ನು ಟೆಂಟ್ ಶಾಲೆ ಅಥವಾ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ದಾಖಲಿಸಿ ಎಂದು ಸಲಹೆ ನೀಡಿದರು.

2024-25 ನೇ ಸಾಲಿನಲ್ಲಿ ಒಟ್ಟು 832 ತಪಾಸಣೆಗಳು, 40 ಬಾಲ/ಕಿಶೋರಕಾರ್ಮಿಕರು ಪತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಬಾಲ/ಕಿಶೋರಕಾರ್ಮಿಕರನ್ನು ನೇಮಿಸಿಕೊಂಡ ಮಾಲೀಕರ ವಿರುದ್ದ 6 ಪ್ರಕರಣಗಳಲ್ಲಿ ಎಫ್.ಐ.ಆರ್ ಆಗಿದ್ದು,16 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಲಕ್ಷ್ಮಿಕಾಂತರೆಡ್ಡಿ ತಿಳಿಸಿದರು.

ಸಭೆಯಲ್ಲಿ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಸ್ಥಳೀಯ ಸರ್ಕಾರೇತರ ಸಂಸ್ಥೆಯ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Share this with Friends

Related Post