ಜುಲೈ.12 ಮೊದಲನೇ ಆಷಾಢ ಶುಕ್ರವಾರ: ಸಿದ್ಧತೆಗೆ ಡಿಸಿ ರಾಜೇಂದ್ರ ಸೂಚನೆ
ಮೈಸೂರು, ಜೂ. 21: ಮೈಸೂರಿನ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಜುಲೈ.12 ರಂದು ಮೊದಲನೇ ಆಷಾಢ ಶುಕ್ರವಾರ ಪೂಜೆ ನೆರವೇರಲಿದೆ.
2024ನೇ ಸಾಲಿನ ಆಷಾಡ ಶುಕ್ರವಾರ ಹಾಗೂ ಅಮ್ಮನವರ ಜನ್ಮೋತ್ಸವ ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು ಸೂಚಿಸಿದರು.
ಶುಕ್ರವಾರ ಮೈಸೂರು ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಆಷಾಢ ಶುಕ್ರವಾರ ಹಾಗೂ ಅಮ್ಮನವರ ಜನ್ಮೋತ್ಸವ ಧಾರ್ಮಿಕ ಕಾರ್ಯಕ್ರಮ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ಈ ವರ್ಷ ಜುಲೈ 12ರಂದು ಮೊದಲನೇ ಆಷಾಢ ಶುಕ್ರವಾರ, ಜುಲೈ 19ರಂದು ಎರಡನೇ ಆಷಾಢ ಶುಕ್ರವಾರ, ಜುಲೈ 26ರಂದು ಮೂರನೇ ಆಷಾಢ ಶುಕ್ರವಾರ, ಜುಲೈ 27ರ ಶನಿವಾರ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಕಾರ್ಯ ಕ್ರಮ ಹಾಗೂ ಆಗಸ್ಟ್ 2ರಂದು ಕೊನೆಯ ಆಷಾಢ ಶುಕ್ರವಾರದ ಪೂಜಾ ಕಾರ್ಯಕ್ರಮ ಇರಲಿದೆ.
ಹೆಚ್ಚಿನ ಭಕ್ತರು ಆಗಮಿಸುವುದರಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು.
ಜುಲೈ ಮೊದಲ ವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿ ಗಳ ಜೊತೆ ಆಷಾಢ ಶುಕ್ರವಾರ ಕುರಿತು ಆಗಿರುವ ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಚಾಮುಂಡೇಶ್ವರಿ ಬೆಟ್ಟದಲ್ಲಿ ದಾಸೋಹ ಭವನದಲ್ಲಿ ನಡೆಯುವ ಪ್ರಸಾದ ವಿತರಣಾ ಕಾರ್ಯಕ್ರಮದ ಜೊತೆಗೆ ಭಕ್ತಾದಿಗಳು ಸಹ ಅಲ್ಲಲ್ಲಿ ಪ್ರಸಾದ ವಿತರಣೆ ಮಾಡುವುದರಿಂದ ಆಹಾರದ ಸುರಕ್ಷತೆಗೆ ಗಮನ ಕೊಡಲಾಗಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ರಾಜೇಂದ್ರ ಸೂಚಿಸಿದರು.
ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ವಾಹನಗಳ ಪಾರ್ಕಿಂಗ್ ಅನ್ನು ಕ್ರಮಬದ್ಧವಾಗಿ ಮಾಡಿಸಬೇಕು. ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.
ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಬೇಕು. ಚಾಮುಂಡಿ ಬೆಟ್ಟದಲ್ಲಿನ ಅಂಗಡಿಗಲ್ಲಿಯೂ ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ. ಚಾಮುಂಡಿ ಬೆಟ್ಟದಲ್ಲಿ ಸಿಸಿಟಿವಿ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಬೇಕು ಎಂದು ಹೇಳಿದರು.
ಯಾವುದೇ ಪ್ಲೆಕ್ಸ್ ಬ್ಯಾನರ್ ಗಳನ್ನು ಅಳವಡಿಸುವಂತಿಲ್ಲ. ಪಾಸ್ ವ್ಯವಸ್ಥೆ ಇರುವುದಿಲ್ಲ. ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ದರ್ಶನ ಸುಗಮವಾಗಿ ಆಗಬೇಕು. ಬರುವ ಭಕ್ತಾದಿಗಳಿಗೆ ಪೊಲೀಸ್ ಇಲಾಖೆಯಿಂದ ಭದ್ರತೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಕೆ ಎಂ ಗಾಯತ್ರಿ, ಉಪ ಪೊಲೀಸ್ ಆಯುಕ್ತರಾದ ಮುತ್ತುರಾಜ್, ಜಾನ್ಹವಿ, ಅಪರ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.