Tue. Mar 10th, 2026

ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ: ಪೂರ್ವಸಿದ್ಧತೆಗೆ ಸಮಿತಿ ರಚನೆಗೆ ಸರ್ಕಾರ ಕ್ರಮ

Share this with Friends

ಬೆಂಗಳೂರು: ಮುಂದಿನ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಕಾರ್ಕಳದ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ವ್ಯವಸ್ಥಿತವಾಗಿ ಆಯೋಜಿಸಲು ಸರ್ಕಾರ ಶೀಘ್ರವೇ ಸಮಿತಿ ರಚಿಸಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.

ವಿಧಾನಸಭೆಯ ಗಮನ ಸೆಳೆಯುವ ಸೂಚನೆಯಡಿ ಈ ವಿಷಯ ಪ್ರಸ್ತಾಪಿಸಿದ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, “ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸಲು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗಾಗಿ ಕೂಡಲೇ ಸಹಾಯಕ ಆಯುಕ್ತರೊಬ್ಬರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕು” ಎಂದು ಒತ್ತಾಯಿಸಿದರು.

ಶಾಸಕರ ಈ ಮನವಿಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, “ಮಹಾಮಸ್ತಕಾಭಿಷೇಕದ ಯಶಸ್ವಿಗಾಗಿ ಜಿಲ್ಲಾ ಮಟ್ಟದಲ್ಲಿ ಸಹಾಯಕ ಆಯುಕ್ತರ ನೇತೃತ್ವದಲ್ಲಿಯೇ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು” ಎಂದರು.

77 ಕೋಟಿ ರೂ. ಅನುದಾನದ ಅಂದಾಜು:

ಈ ಬಾರಿಯ ಮಹಾಮಸ್ತಕಾಭಿಷೇಕದ ಪೂರ್ವಸಿದ್ಧತೆಗಾಗಿ ಅಂದಾಜು 77 ಕೋಟಿ ರೂ.ಗಳ ಅನುದಾನದ ಅಗತ್ಯವಿದೆ ಎಂದು ಗುರುತಿಸಲಾಗಿದೆ. ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಈ ಮಹತ್ವದ ಆಚರಣೆಗೆ ಯಾವುದೇ ಕೊರತೆಯಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

 


Share this with Friends

Related Post