Fri. Mar 6th, 2026

ಬೆಳೆವಿಮೆ ಜಾರಿಯಲ್ಲಿ ಕರ್ನಾಟಕಕ್ಕೆ ದೇಶದಲ್ಲೇ ಪ್ರಥಮ ಸ್ಥಾನ:ಸಿಎಂ ಸಿದ್ದರಾಮಯ್ಯ

Share this with Friends

ಬೆಂಗಳೂರು: “ನಮ್ಮ ಸರ್ಕಾರ ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸಲು ಬದ್ಧವಾಗಿದ್ದು,ಬೆಳೆವಿಮೆ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಕರ್ನಾಟಕವು ದೇಶದಲ್ಲೇ ನಂಬರ್ 1 ರಾಜ್ಯವಾಗಿ ಹೊರಹೊಮ್ಮಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ನಡೆದ ‘ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2026: ಉತ್ಪಾದನೋತ್ತರ ಕೃಷಿ ಮತ್ತು ರೈತರ ಸಬಲೀಕರಣ’ ಸಮಾವೇಶದಲ್ಲಿ ಭಾಗವಹಿಸಿ ಸಾಧಕ ರೈತರಿಗೆ ‘ರಾಜ್ಯಮಟ್ಟದ ಕೃಷಿ ಪಂಡಿತ’ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಸಿಎಂ, ರೈತರು ಕೇವಲ ಬೆಳೆಗಾರರಲ್ಲ, ‘ಉದ್ಯಮಿ’ಗಳಾಗಬೇಕು,ಕೃಷಿಯಲ್ಲಿ ಕೇವಲ ಬೆಳೆ ಬೆಳೆಯುವುದರಿಂದ ಮಾತ್ರ ಆರ್ಥಿಕ ಸುಧಾರಣೆ ಸಾಧ್ಯವಿಲ್ಲ. ಬೆಳೆದ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಬದಲು ಸಂಗ್ರಹಣೆ, ಸಂಸ್ಕರಣೆ (Processing), ಪ್ಯಾಕೇಜಿಂಗ್ ಮತ್ತು ಉಪ ಉತ್ಪನ್ನಗಳ ತಯಾರಿಕೆಯಲ್ಲಿ ರೈತರು ತೊಡಗಬೇಕು ಎಂದು ಕರೆ ನೀಡಿದರು.

ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿರುವುದು ಆಶಾದಾಯಕ. ಪ್ರಶಸ್ತಿ ವಿಜೇತ ಮಹಿಳಾ ಕೃಷಿಕರ ಸಾಧನೆ ಎಲ್ಲರಿಗೂ ಮಾದರಿ.ಕೃಷಿ ಅವಲಂಬಿತರ ಸಂಖ್ಯೆ ಶೇ. 80 ರಿಂದ ಶೇ. 62ಕ್ಕೆ ಕುಸಿದಿದೆ. ಆಧುನಿಕ ತಂತ್ರಜ್ಞಾನ ಬಳಸಿ ಯುವಜನರು ಕೃಷಿಯನ್ನು ಉದ್ಯಮವನ್ನಾಗಿ ಸ್ವೀಕರಿಸಬೇಕು ಎಂದರು.

ಕೃಷಿ ಇಲಾಖೆಯ ಪ್ರಮುಖ ಕೊಡುಗೆಗಳು:

ರೈತರ ನೆರವಿಗೆ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ಅಂಕಿ-ಅಂಶಗಳನ್ನು ಸಿಎಂ ಈ ವೇದಿಕೆಯಲ್ಲಿ ಬಿಡುಗಡೆ ಮಾಡಿದರು

ಬೆಳೆವಿಮೆ ಪರಿಹಾರಕ್ಕೆ ಈವರೆಗೆ 6,000 ಕೋಟಿ ರೂ. ರೈತರ ಖಾತೆಗೆ ಜಮೆ

ಯಂತ್ರೋಪಕರಣಗಳ ಖರೀದಿಗಾಗಿ 1,500 ಕೋಟಿ ರೂ. ಸಹಾಯಧನ

ಕೃಷಿ ಭಾಗ್ಯ ಮರುಸ್ಥಾಪನೆಗಾಗಿ 200 ಕೋಟಿ ರೂ. ಅನುದಾನ

ಮೆಕ್ಕೆಜೋಳ ಖರೀದಿ

ಎಥನಾಲ್ ತಯಾರಕರ ಮೂಲಕ 40 ಲಕ್ಷ ಮೆ.ಟನ್ ಖರೀದಿಗೆ ಅನುವು

ಕೇಂದ್ರದ ಹೊಸ ಕಾಯ್ದೆಗೆ ವಿರೋಧ:

ಮನರೇಗಾ (ಉದ್ಯೋಗ ಖಾತ್ರಿ) ಯೋಜನೆಯನ್ನು ರದ್ದುಪಡಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ವಿಬಿ ಜಿ ರಾಮ್ ಜಿ’ ಕಾಯ್ದೆಯು ರೈತ ವಿರೋಧಿಯಾಗಿದೆ ಎಂದು ಸಿಎಂ ಆರೋಪಿಸಿದರು. ರಾಜ್ಯಗಳ ಒಪ್ಪಿಗೆಯಿಲ್ಲದೆ ತಂದಿರುವ ಈ ಬದಲಾವಣೆಯಿಂದಾಗಿ ಗ್ರಾಮ ಸಭೆಗಳ ಅಧಿಕಾರ ಕಡಿತಗೊಂಡಿದೆ. ಈ ‘ಕುತಂತ್ರ’ವನ್ನು ರೈತರು ಒಕ್ಕೊರಲಿನಿಂದ ವಿರೋಧಿಸಬೇಕೆಂದು ಅವರು ಕರೆ ನೀಡಿದರು.

ಕಬ್ಬು ಬೆಳೆಗಾರರೊಂದಿಗೆ ಚರ್ಚಿಸಿ ಸೂಕ್ತ ಬೆಲೆ ನಿಗದಿಪಡಿಸಲಾಗಿದೆ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ಒಂದು ತಿಂಗಳು ಮುಂಚಿತವಾಗಿಯೇ ತೆರೆದು ರೈತರ ಹಿತ ಕಾಯಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

 


Share this with Friends

Related Post