ಮೈಸೂರು: ಸಾರಿಗೆ ಬಸ್ ದರವನ್ನು ಶೇ.15 ರಷ್ಟು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಈ ವೇಳೆ ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದಿನ ಬೆಳಗಾದರೆ ಒಂದಲ್ಲ ಒಂದು ಬೆಲೆ ಏರಿಕೆ ಮಾಡಿ, ಕನ್ನಡಿಗರ ರಕ್ತ ಹೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಬಕಾಸುರ ಹೊಟ್ಟೆ ತುಂಬಿಸಲು ಕನ್ನಡಿಗರು ಇನ್ನೆಷ್ಟು ತೆರಿಗೆ ಶುಲ್ಕ ತೆತ್ತಬೇಕೋ ಗೊತ್ತಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಹಲವಾರು ಬಿಟ್ಟಿ ಭಾಗ್ಯಗಳನ್ನು ಘೋಷಣೆ ಮಾಡಿ, ಈಗ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ. ಶ್ರೀಲಂಕಾ, ದೆಹಲಿಯಲ್ಲಾದಂತೆ ನಮ್ಮ ರಾಜ್ಯವು ಆರ್ಥಿಕ ದೀವಾಳಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆಎಸ್ಆರ್ಟಿಸಿ ಸಿಬ್ಬಂದಿಗೆ ಸರಿಯಾಗಿ ಸಂಬಳ ನೀಡದೆ, ಶಕ್ತಿ ಯೋಜನೆಗೆ ಹಣ ಹೊಂದಿಸಲು ಶೇ 15 ರಷ್ಟು ಬಸ್ ದರ ಏರಿಕೆ ಮಾಡಿರುವುದು ಸರಿಯಲ್ಲ ಎಂದು ಬೇಸರಪಟ್ಟರು.
ಈ ಕೂಡಲೇ ಮುಖ್ಯಮಂತ್ರಿಗಳು ಏರಿಕೆ ಮಾಡಿರುವ ಸಾರಿಗೆ ದರವನ್ನು ವಾಪಸ್ ಪಡೆಯಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ತೇಜೇಶ್ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕೃಷ್ಣಪ್ಪ, ಪ್ರಭುಶಂಕರ್, ಹನುಮಂತಯ್ಯ, ಪ್ರಭಾಕರ್, ನೇಹ, ಸಿಂಧುವಳಿ ಶಿವಕುಮಾರ್, ಭಾಗ್ಯಮ್ಮ, ಡಾ . ಶಾಂತರಾಜೇಅರಸ್, ನಾಗರಾಜು, ಶುಭಶ್ರೀ, ವರ್ಕುಡ್ ಕೃಷ್ಣೇಗೌಡ, ಸ್ವಾಮಿ ಗೌಡ, ರಘುಅರಸ್, ಪ್ರದೀಪ್, ದರ್ಶನ್ ಗೌಡ, ಚಂದ್ರಶೇಖರ್, ತ್ಯಾಗರಾಜ್, ಬಸವರಾಜು, ಗುರುಮಲ್ಲಪ್ಪ ಹಾಗೂ ರಾಮಕೃಷ್ಣೇಗೌಡ ಮತ್ತಿತರರು ಪಾಲ್ಗೊಂಡಿದ್ದರು.