Thu. Mar 5th, 2026

ಮತ ಕಳ್ಳತನವನ್ನು ಮೊದಲು ಪತ್ತೆ ಹಚ್ಚಿದ್ದೇ ಕರ್ನಾಟಕದಲ್ಲಿ: ಡಿಸಿಎಂ ಡಿಕೆ ಶಿವಕುಮಾರ್

Share this with Friends

ನವದೆಹಲಿ: ಮತ ಕಳ್ಳತನವನ್ನು ಮೊದಲು ಪತ್ತೆ ಹಚ್ಚಿದ್ದೇ ನಮ್ಮ ರಾಜ್ಯದಲ್ಲಿ. ಎಐಸಿಸಿ ಸಂಶೋಧನಾ ವಿಭಾಗ, ನಮ್ಮ ಅಭ್ಯರ್ಥಿಯಾಗಿದ್ದ ಮನ್ಸೂರ್ ಅಲಿ ಖಾನ್, ಕೆಪಿಸಿಸಿ ತಂಡ ಸೇರಿ ಈ ಮತ ಕಳ್ಳತನ ಪತ್ತೆ ಮಾಡಿತು. ಫ್ರೀಡಂ ಪಾರ್ಕ್ ನಿಂದ ಆರಂಭಗೊಂಡ ಹೋರಾಟ ದೇಶಾದ್ಯಂತ ಪಸರಿಸಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ದೆಹಲಿಯಲ್ಲಿ ಎಐಸಿಸಿ ನೂತನ ಕಟ್ಟಡ ಇಂದಿರಾ ಭವನದ ಆವರಣದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,“ಚುನಾವಣೆಗಳಲ್ಲಿ ಮತ ಕಳ್ಳತನ‌ ನಡೆಯುತ್ತಿರುವ ಬಗ್ಗೆ ಮೊದಲು ಪತ್ತೆ ಹಚ್ಚಿದ್ದೇ ಕರ್ನಾಟಕದಲ್ಲಿ. ಈಗ ಮಹಾರಾಷ್ಟ್ರ, ಹರಿಯಾಣ, ಬಿಹಾರದಲ್ಲಿ ನಡೆಸಿರುವ ಅಕ್ರಮಗಳು ಬೆಳಕಿಗೆ ಬಂದಿವೆ”.“ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿ ಫ್ರೀಡಂ ಪಾರ್ಕ್ ನಿಂದ ಈ ಹೋರಾಟ ಆರಂಭಿಸಲಾಯಿತು. ನಂತರ ಮಹಾರಾಷ್ಟ್ರ, ಹರಿಯಾಣ ಚುನಾವಣಾ ಅಕ್ರಮ ಬಯಲಾಗಿ ಈ ಹೋರಾಟ ಬಿಹಾರದವರೆಗೂ ಹಬ್ಬಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಅವರ ನಿರ್ದೇಶನದ ಮೇರೆಗೆ ಈ ಅಭಿಯಾನ ಪೂರ್ಣಗೊಳಿಸಿದ್ದೇವೆ” ಎಂದರು.

ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಾಂಕೇತಿಕವಾಗಿ ಸಹಿ ಸಂಗ್ರಹ ಅಭಿಯಾನದ ದಾಖಲೆಗಳನ್ನು ಹಸ್ತಾಂತರಿಸಿದ್ದೇವೆ. 100 ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಅವರು ನಿಭಾಯಿಸಿದ್ದ ಜವಾಬ್ದಾರಿಯನ್ನು ಈಗ ನಮ್ಮ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅವರು ನಿಭಾಯಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮತದಾನದ ಹಕ್ಕು ರಕ್ಷಣೆ ಹೋರಾಟ ಮಾಡಿದ್ದೇವೆ. ಒಬ್ಬರಿಗೆ ಒಂದು ಮತ ಎಂದು ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.

ಕುಮಾರಸ್ವಾಮಿ ಅವರೂ ಭಯೋತ್ಪಾದಕರ ಒಂದು ಭಾಗವೇ?:

ವಿಧಾನಸೌಧದಲ್ಲಿ ಭಯೋತ್ಪಾದಕರಿದ್ದಾರೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರೂ ಸಹ ಭಯೋತ್ಪಾದಕರ ಭಾಗವಾಗಿದ್ದಾರೆಯೇ?  ಅವರೂ ಸಹ ವಿಧಾನಸೌಧದಲ್ಲಿ ಕುಳಿತಿರಲಿಲ್ಲವೇ? ಅವರಿಗೂ ಹಾಗೂ ಅವರ ಪಕ್ಷದವರಿಗೂ, ಅವರ ಆಡಳಿತಕ್ಕೂ ಇದು ಅನ್ವಯಿಸುತ್ತದೆ” ಎಂದು ತಿರುಗೇಟು ನೀಡಿದರು.

ಸಂವಿಧಾನಿಕ ಸಂಸ್ಥೆಗಳ ದುರುಪಯೋಗ:

“ಚುನಾವಣಾ ಆಯೋಗವು ಬಿಹಾರದ ಮತದಾರರಿಗೆ ಸರಿಯಾದ ನ್ಯಾಯ ಒದಗಿಸಿಲ್ಲ. ಬಿಜೆಪಿ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ‌ ಮಾಡಿಕೊಂಡಿದೆ. ಯಾವುದು ಕಾಡದಿದ್ದರೂ ಆತ್ಮಸಾಕ್ಷಿ ಎನ್ನುವುದು ಇದ್ದೇ ಇರುತ್ತದೆ. ಅದು ಅಂತಿಮವಾಗಿ ಕೆಲಸ ಮಾಡಲಿದೆ” ಎಂದು ಹೇಳಿದರು.

ಮುಖ್ಯಮಂತ್ರಿ ಹುದ್ದೆ ಬದಲಾವಣೆ ಬಗೆಗಿನ ಊಹಾಪೋಹಗಳ ಬಗ್ಗೆ ಕೇಳಿದಾಗ, “ನಾನು ರಾಜಕೀಯ ವಿಚಾರಗಳನ್ನು ಮಾತನಾಡುವುದಿಲ್ಲ. ನಾನು ಪ್ರಜಾಪ್ರಭುತ್ವ, ಮತದಾನದ ಹಕ್ಕು, ಸಂವಿಧಾನವನ್ನು ಉಳಿಸುವ ವಿಚಾರವಾಗಿ ಮಾತನಾಡುತ್ತೇನೆ” ಎಂದು ಉತ್ತರಿಸಿದರು.


Share this with Friends

Related Post