Sat. Mar 14th, 2026

ಊರಿಗೆ ಹೋಗುವವರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ: ಯುಗಾದಿ, ರಂಜಾನ್‌ಗೆ 2,000 ವಿಶೇಷ ಬಸ್‌ಗಳ ಸಂಚಾರ!

Share this with Friends

ಬೆಂಗಳೂರು: ಕ್ಯಾಲೆಂಡರ್‌ನಲ್ಲಿ ಸಾಲು ಸಾಲು ರಜೆಗಳು ಬಂದಾಗ ಮನಸ್ಸು ತಂತಾನೇ ಹಳ್ಳಿಯ ಕಡೆಗೆ ಮುಖ ಮಾಡುತ್ತದೆ. ಈ ಬಾರಿ ಯುಗಾದಿ ಮತ್ತು ರಂಜಾನ್ ಹಬ್ಬಗಳು ಬೆನ್ನಲ್ಲೇ ಬಂದಿದ್ದು, ಸಿಲಿಕಾನ್ ಸಿಟಿಯಲ್ಲಿರುವ ಮಂದಿ ತಮ್ಮವರೊಂದಿಗೆ ಹಬ್ಬ ಆಚರಿಸಲು ಸಜ್ಜಾಗುತ್ತಿದ್ದಾರೆ. ಈ ಸಂಭ್ರಮಕ್ಕೆ ಕಿರಿಕಿರಿ ಇಲ್ಲದ ಪ್ರಯಾಣದ ಮೆರುಗು ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಭರ್ಜರಿ ತಯಾರಿ ನಡೆಸಿದೆ.

2,000 ಹೆಚ್ಚುವರಿ ಬಸ್‌ಗಳ ಮೆರವಣಿಗೆ:

ಊರಿಗೆ ಹೋಗುವವರ ದಟ್ಟಣೆಯನ್ನು ಅರಿತಿರುವ ನಿಗಮವು ಮಾರ್ಚ್ 18, 19 ಮತ್ತು 20 ರಂದು ಬೆಂಗಳೂರಿನಿಂದ ವಿವಿದೆಡೆಗೆ ಬರೊಬ್ಬರಿ 2,000 ಹೆಚ್ಚುವರಿ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಬರಿ ಬೆಂಗಳೂರಿನಿಂದ ಅಷ್ಟೇ ಅಲ್ಲ, ಹಬ್ಬ ಮುಗಿಸಿ ಮರಳುವವರಿಗಾಗಿ ಮಾರ್ಚ್ 22 ರಂದು ರಾಜ್ಯದ ಮೂಲೆ ಮೂಲೆಗಳಿಂದ ಹಾಗು ನೆರೆ ರಾಜ್ಯಗಳ ಪ್ರಮುಖ ಸ್ಥಳಗಳಿಂದ ಬೆಂಗಳೂರಿಗೆ ಮರಳು ಅನುಕೂಲವಾಗುವಂತೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಯಾವ ನಿಲ್ದಾಣದಿಂದ ಎಲ್ಲಿಗೆ?

ಮೆಜೆಸ್ಟಿಕ್ (ಕೆಂಪೇಗೌಡ ನಿಲ್ದಾಣ): ಇಲ್ಲಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯದಂತಹ ಪುಣ್ಯಕ್ಷೇತ್ರಗಳಿಂದ ಹಿಡಿದು, ಉತ್ತರ ಕರ್ನಾಟಕದ ಬೆಳಗಾವಿ, ಕಲಬುರಗಿ, ವಿಜಯಪುರ ಹಾಗೂ ಅಂತರರಾಜ್ಯದ ಹೈದರಾಬಾದ್, ತಿರುಪತಿಯವರೆಗೆ ಬಸ್‌ಗಳು ಲಭ್ಯ.

ಮೈಸೂರು ರಸ್ತೆ ನಿಲ್ದಾಣ: ಸಾಂಸ್ಕೃತಿಕ ನಗರಿ ಮೈಸೂರು, ಕೊಡಗಿನ ಮಡಿಕೇರಿ ಹಾಗೂ ಸುತ್ತಮುತ್ತಲಿನ ಊರುಗಳಿಗೆ ಇಲ್ಲಿಂದ ಬಸ್‌ಗಳು ಹೊರಡಲಿವೆ.

ಜೆಬಿಗೆ ಹೊರೆಯಾಗದ ಪ್ರಯಾಣ – ಆಕರ್ಷಕ ರಿಯಾಯಿತಿ!

ಬರಿ ಬಸ್ ಸೌಲಭ್ಯವಷ್ಟೇ ಅಲ್ಲ, ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಬಂಪರ್ ರಿಯಾಯಿತಿಯನ್ನೂ ನೀಡಿದೆ:

ಗುಂಪು ರಿಯಾಯಿತಿ: ನಾಲ್ಕು ಅಥವಾ ಹೆಚ್ಚು ಮಂದಿ ಒಟ್ಟಾಗಿ ಬುಕ್ ಮಾಡಿದರೆ ಶೇ. 5ರಷ್ಟು ಕಡಿತ.

ರೌಂಡ್ ಟ್ರಿಪ್ ಆಫರ್: ಹೋಗುವ ಮತ್ತು ಬರುವ ಟಿಕೆಟ್ ಒಟ್ಟಿಗೆ ಬುಕ್ ಮಾಡಿದರೆ ಬರುವ ಪ್ರಯಾಣ ದರದಲ್ಲಿ ಶೇ. 10ರಷ್ಟು ರಿಯಾಯಿತಿ ಸಿಗಲಿದೆ.

ಡಿಜಿಟಲ್ ಬುಕಿಂಗ್ ಸುಲಭ:

ಈಗಾಗಲೇ ಸಾವಿರಾರು ಮಂದಿ ಸ್ಮಾರ್ಟ್‌ಫೋನ್ ಮೂಲಕವೇ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಪ್ರಯಾಣಿಕರು www.ksrtc.karnataka.gov.in ವೆಬ್‌ಸೈಟ್ ಮೂಲಕ ಮುಂಗಡವಾಗಿ ಸೀಟು ಕಾಯ್ದಿರಿಸಬಹುದು. ಟಿಕೆಟ್ ಮೇಲೆ ನಿಮ್ಮ ಬಸ್ ಹೊರಡುವ ನಿಖರವಾದ ‘ಪಿಕ್-ಅಪ್ ಪಾಯಿಂಟ್’ ಇರುತ್ತದೆ, ಅದನ್ನು ಗಮನಿಸಲು ಮರೆಯಬೇಡಿ.

ಒಟ್ಟಿನಲ್ಲಿ, ಈ ಹಬ್ಬದ ಸೀಸನ್‌ನಲ್ಲಿ ಸಾರ್ವಜನಿಕರು ಆರಾಮವಾಗಿ, ಸುಕ್ಷೇಮವಾಗಿ ತಮ್ಮ ಊರು ಸೇರಲು ಕೆಎಸ್‌ಆರ್‌ಟಿಸಿ ಕೆಂಪು ಬಸ್‌ಗಳು ರಸ್ತೆಗೆ ಇಳಿಯಲು ಸಿದ್ಧವಾಗಿವೆ.


Share this with Friends

Related Post