ಬೆಂಗಳೂರು: ವೈದ್ಯಕಿಯ ಶಿಕ್ಷಣ ನಿರ್ದೇಶನಾಲಯ ವ್ಯಾಪ್ತಿಗೆ ಬರುವ ಬೆಂಗಳೂರು ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್ಐ) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಅನ್ವಯ ಟೆಂಡರ್ ನಡೆಸುವ ಬದಲು ನಿಯಮಬಾಹಿರವಾಗಿ ಕೋಟೇಷನ್ (4ಸಿ) ಮೂಲಕ ಹತ್ತಾರು ಕೋಟಿ ರೂ.ಔಷಧ, ಉಪಕರಣ, ರಾಸಾಯನ ಸೇರಿ ಇತರೆ ವಸ್ತುಗಳನ್ನು ಖರೀದಿಸಿರುವುದು ಬಹಿರಂಗವಾಗಿದೆ.
ಬಿಎಂಸಿಆರ್ಐ ವ್ಯಾಪ್ತಿಯ ವಿಕ್ಟೋರಿಯಾ, ವಾಣಿವಿಲಾಸ್, ಟ್ರಾಮಾ ಸೆಂಟರ್, ಪ್ರಧಾನ ಮಂತ್ರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಇನ್ಸಿಟಿಟ್ಯೂಟ್ ಆಫ್ ಗ್ಯಾಸ್ಟ್ರೊ ಎಂಟೋರಾಲಜಿ, ಸಂಜಯ ಗಾಂಧಿ ಆಸ್ಪತ್ರೆ, ವೈದ್ಯಕಿಯ ಶಿಕ್ಷಣ ನಿರ್ದೇಶನಾಲಯ ವ್ಯಾಪ್ತಿಗೆ ಬರುವ ಬಳ್ಳಾರಿಯ ವಿಮ್ಸ್, ಮೈಸೂರಿನ ಕೆ.ಆರ್. ಆಸ್ಪತ್ರೆ, ಬೀದರ್ ಮೆಡಿಕಲ್ ಕಾಲೇಜು, ಹುಬ್ಬಳ್ಳಿ ಮೆಡಿಕಲ್ ಕಾಲೇಜು ಸೇರಿ ಹೊಸದಾಗಿ ಮೆಡಿಕಲ್ ಕಾಲೇಜುಗಳ ಆಸ್ಪತ್ರೆಗಳಲ್ಲಿ ಕೋಟೋಷನ್ (4ಸಿ) ದಂಧೆ ಮೂಲಕ ಅಂದಾಜು 13 ಕೋಟಿ ರೂ. ಹಗರಣ ನಡೆಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಅತಿ ಅವಶ್ಯಕತೆ ಇದ್ದಾಗ, ಟೆಂಡರ್ ಪ್ರಕ್ರಿಯೆ ಸತತ ವಿಳಂಬವಾದರೆ ಕೆಟಿಪಿಪಿ ಕಾಯ್ದೆ ಅಡಿ ಒಂದು ಲಕ್ಷ ರೂ.ಒಳಗಿನ ಉಪಕರಣ, ಔಷಧಗಳನ್ನು ಕೋಟೇಷನ್ ಮೂಲಕ ಖರೀದಿಸಬಹುದು. ಆದರೆ, ಕೆಟಿಪಿಪಿ ನಿಯಮವನ್ನು ಗಾಳಿಗೆ ತೂರಿ ವೈದ್ಯಕಿಯ ಶಿಕ್ಷಣ ಸಚಿವರ ಹೆಸರು ಹೇಳಿಕೊಂಡು ಕೆಲವರು, ಬೆಂಗಳೂರು ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕೋಟೇಷನ್ ಮೂಲಕ ಅನುಭವ ಇಲ್ಲದ, ಈಗಷ್ಟೇ ಶುರುವಾದ ಕಂಪನಿಗಳಿಗೆ ವರ್ಕ್ ಅರ್ಡರ್ ಕೊಟ್ಟು ಜೀವರಕ್ಷಕ ಔಷಧ, ಉಪಕರಣ, ರಾಸಾಯನ ಖರೀದಿಸಲಾಗಿದೆ. ಬಿಎಂಸಿಆರ್ಐ ಡೀನ್, ನಿರ್ದೇಶಕ ಈ ಹಗರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಈಗಾಗಲೇ ನಿಯಮದಂತೆ ಟೆಂಡರ್ ಮೂಲಕ ರೇಟ್ ಕಾಂಟ್ರಕ್ಟರ್ ಪಡೆದಿರುವವರಿಗೆ ದಬ್ಬಾಳಿಕೆ ನಡೆಸುವ ಆಯಾ ಆಸ್ಪತ್ರೆ ನಿರ್ದೇಶಕರು, ಸಚಿವರ ಹೆಸರು ಹೇಳಿ ಅರ್ಹ ಕಂಪನಿಗಳಿಗೆ ಸಿಗಬೇಕಿದ್ದ ವರ್ಕ್ ಅರ್ಡರ್ಗಳನ್ನು ಉದ್ದೇಶಪೂರ್ವಕವಾಗಿ ಕಸಿದುಕೊಂಡು ಅರ್ಹತೆ ಇಲ್ಲದ ಮತ್ತು ಅನುಭವ ಇಲ್ಲದಿರುವ ಕಂಪನಿಗಳಿಗೆ ವರ್ಕ್ ಅರ್ಡರ್ ನೀಡಲಾಗಿದೆ. ಸಚಿವರ ಹೆಸರು ಹೇಳಿ ಈ ದಂಧೆ ಮಾಡುತ್ತಿರುವವರಿಗೆ ವರ್ಕ್ ಅರ್ಡರ್ ಕೊಡಲು ಕೆಲ ಸಿಬ್ಬಂದಿಗೆ ಇಷ್ಟವಿಲ್ಲದಿದ್ದರೂ ಆಸ್ಪತ್ರೆಗಳ ನಿದೇಶಕರು ಇವರ ಮೇಲೆ ಒತ್ತಡ ಹೇರಿ ವರ್ಕ್ ಅರ್ಡರ್ ಕೊಡಿಸುತ್ತಿದ್ದಾರೆ. ಅನುಭವ ಇಲ್ಲದ ಕಂಪನಿಗಳಿಂದ ಔಷಧ ಪಡೆದು ಮಕ್ಕಳು ಸೇರಿ ಮಹಿಳಾ ರೋಗಿಗಳಿಗೆ ಸೇವಿಸಿ ಏನಾದರೂ ತೊಂದರೆಯಾದರೆ ಯಾರು ಹೊಣೆ? ಎಂಬ ಆತಂಕವೂ ಕಾಡುತ್ತಿದೆ.
ನಿರ್ದೇಶಕರ ಅಂಧಾದಾರ್ಬಾರ್:
ಟೆಂಡರ್ ಮೌಲ್ಯ 5 ಲಕ್ಷ ರೂ. ದಾಟಿದರೆ ಕೆಟಿಪಿಪಿ ಕಾಯ್ದೆಯಂತೆ ಆನ್ಲೈನ್ನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಅತಿ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿದವರಿಗೆ ಕಾರ್ಯಾದೇಶ ಪತ್ರ ನೀಡಬೇಕು. ತುರ್ತು ಪರಿಸ್ಥಿತಿಯಲ್ಲಿ ಅತಿ ಅವಶ್ಯಕತೆ ಇದ್ದಾಗ, ಟೆಂಡರ್ ಪ್ರಕ್ರಿಯೆ ಸತತ ವಿಳಂಬವಾದರೆ ಕೆಟಿಪಿಪಿ ಕಾಯ್ದೆ ಅಡಿ ಒಂದು ಲಕ್ಷ ರೂ. ಒಳಗಿನ ಉಪಕರಣ, ಔಷಧಗಳನ್ನು ಕೋಟೇಷನ್ ಮೂಲಕ ಖರೀದಿಸಬಹುದು.
ಆದರೆ, ಬಿಎಂಸಿಆರ್ಐ ಡೀನ್ ಮತ್ತು ನಿರ್ದೇಶಕ ಕೆಟಿಪಿಪಿ ಕಾಯ್ದೆ ಅಡಿ 4 (ಸಿ) ವಿನಾಯಿತಿ ದುರ್ಬಳಕೆ ಮಾಡಿಕೊಂಡು ಕೋಟೇಷನ್ ಮೂಲಕ ಅರ್ಹತೆ ಇಲ್ಲದ ಮತ್ತು ಮಾರುಕಟ್ಟೆಯಲ್ಲಿ ಅನುಭವ ಇಲ್ಲದ ಕಂಪನಿಗಳಿಗೆ ಹತ್ತಾರು ಕೋಟಿ ರೂ.ಮೌಲ್ಯದ ಉಪಕರಣ, ಜೀವರಕ್ಷಕ ಔಷಧ ಮತ್ತು ರಾಸಾಯನ ಖರೀದಿಗಾಗಿ ವರ್ಕ್ ಅರ್ಡರ್ ಕೊಟ್ಟಿದ್ದಾರೆ. ಅಕ್ರಮವಾಗಿ ಇವರು 2 ಕಂಪನಿಗಳಿಗೆ ನಡೆಸುತ್ತಿರುವ ಬಗ್ಗೆಯೂ ಆರೋಪಗಳಿವೆ. ಒಂದೊಂದು ಕೋಟೇಷನ್ನಲ್ಲಿ ನಿಗದಿಗಿಂತ ಹೆಚ್ಚು ಮೊತ್ತ ನಮೂದಿಸಿ ಸರ್ಕಾರದ ಬೊಕ್ಕಸಕ್ಕೂ ಲಕ್ಷಾಂತರ ರೂ. ನಷ್ಟವುಂಟು ಮಾಡಲಾಗಿದೆ. ಕಮಿಷನ್ ಆಸೆಗಾಗಿ ಕಂಪನಿಗಳ ಜತೆ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ.
ಸಚಿವರ ಹೆಸರು ಹೇಳಿ ದಬ್ಬಾಳಿಕೆ:
ವಿಕ್ಟೋರಿಯಾ, ರಾಜೀವ್ ಗಾಂಧಿ ಆಸ್ಪತ್ರೆ, ಸಂಜಯಗಾಂಧಿ, ಬೆಂಗಳೂರು ವೈದ್ಯಕಿಯ ಮೆಡಿಕಲ್ ಕಾಲೇಜು ಸೇರಿ ಆಯಾ ಜಿಲ್ಲೆಗಳಲ್ಲಿರುವ ಮೆಡಿಕಲ್ ಕಾಲೇಜುಗಳ ನಿರ್ದೇಶಕರಿಗೆ ನೇರವಾಗಿ ಕರೆ ಮಾಡಿ ಸಚಿವರ ಹೆಸರು ಹೇಳುವ ಗ್ಯಾಂಗ್, ಕೋಟೇಷನ್ ಮೂಲಕ ತಮಗೆ ಟೆಂಡರ್ ನೀಡುವಂತೆ ಬೆದರಿಕೆ ಹಾಕುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಗೊಂಡು ಕ್ರಮ ಕೈಗೊಳ್ಳಬೇಕು. ಕೆಲ ವೈದ್ಯಕಿಯ ಕಾಲೇಜುಗಳಲ್ಲಿ ಜಾಗದ ಕೊರತೆ ಇದ್ದರೂ ಉಪಕರಣಗಳನ್ನು ಸರಬರಾಜು ಮಾಡಲಾಗಿದೆ. ಈಗಾಗಲೇ ಸಾಕಷ್ಟು ಸರಬರಾಜು ಮಾಡಿರುವ ಉಪಕರಣಗಳನ್ನು ಅಳವಡಿಸಲು ಕೆಲವೆಡೆ ಜಾಗವಿಲ್ಲದೆ ಎಲ್ಲೆಂದರಲ್ಲಿ ಬಿಸಾಡಲಾಗಿದೆ.
ಸಚಿವರೇ ಎಚ್ಚೆತ್ತುಕೊಳ್ಳಿ:
ಸಚಿವ ಶರಣ್ ಪ್ರಕಾಶ್ ಪಾಟೀಲ್ ಒಳ್ಳೆಯ ಸಚಿವರು. ಅವರ ವಿರುದ್ಧ ಒಂದು ಕಪ್ಪುಚುಕ್ಕೆಯೂ ಇಲ್ಲ. ತಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ, ಸಿಂಡಿಕೇಟ್ ವ್ಯವಸ್ಥೆ ಮೂಲಕ ತಂಡ ರಚಿಸಿಕೊಂಡು ಕೋಟೇಷನ್ ದಂಧೆ ಮಾಡುತ್ತಿರುವ ಕೆಲವರು, ಸಚಿವರ ಹೆಸರಿಗೆ ಮಸಿ ಬಳಿಯುವ ಯತ್ನ ನಡೆಯುತ್ತಿದೆ. ಈ ಬಗ್ಗೆ ಸಚಿವರು ಎಚ್ಚೆತ್ತುಗೊಂಡು ಕ್ರಮ ಕೈಗೊಳ್ಳಬೇಕಿದೆ. ನಿರ್ದೇಶನಾಲಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಲು ಸಚಿವರು ಮುಂದಾಗಬೇಕು.