ಮಂಡ್ಯ,ಮಾ.15: ಹೊಟ್ಟೆಪಾಡಿಗಾಗಿ ದೇವೇಗೌಡರು ಬಿಜೆಪಿ ಜತೆ ಹೋಗಿದ್ದಾರೆ ಎಂಬ ಸಚಿವ ಚೆಲುವರಾಯಸ್ವಾಮಿ ಹೇಳಿಕೆಗೆ ಮಾಜಿ
ಸಿಎಂ.ಹೆಚ್.ಡಿ.ಕುಮಾರಸ್ವಾಮಿ
ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಶುಕ್ರವಾರ ಲೋಕಸಭೆ ಚುನಾವಣೆಗಾಗಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದೆ ತಮ್ಮನ್ನು ಮಂತ್ರಿ ಮಾಡಿಸುವಂತೆ ಈ ವ್ಯಕ್ತಿ ನನಗೆ ದುಂಬಾಲು ಬಿದ್ದಿದ್ದರು. ಹೊಟ್ಟೆಪಾಡಿಗಾಗಿ ಆಗ ವರು ನನಗೆ ದುಂಬಾಲು ಬಿದ್ದಿದ್ದರಾ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಈತನನ್ನು ಮಂತ್ರಿ ಮಾಡಲು 58 ಶಾಸಕರ ಸಭೆಯನ್ನು ನಾನು ನಡೆಸಬೇಕಾಯಿತು. ಪಿ.ಜಿ.ಆರ್.ಸಿಂಧ್ಯಾ ಅವರ ಮನೆಯಲ್ಲಿ ನಿರ್ಧಾರ ಆಗಿದ್ದು ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರನ್ನು ಮಂತ್ರಿ ಮಾಡಬೇಕು ಎಂದು. ಆದರೆ ನಾನು ಎಲ್ಲರನ್ನೂ ಒಪ್ಪಿಸಿ ಚೆಲುವರಾಯಸ್ವಾಮಿಯ ಹೆಸರನ್ನು ಪಟ್ಟಿಯಲ್ಲಿ ಸೇರಿಸಿ ವಿಜಯಲಕ್ಷ್ಮಿ ಅವರ ಹೆಸರನ್ನು ಹೊಡೆಸಿ ಹಾಕಿಸಿದೆ. ಇದನ್ನು ನಾನು ಮಾಡಿದ್ದು ಹೊಟ್ಟೆಪಾಡಿಗಾಗಿಯೇ? ಇಂಥ ಮನುಷ್ಯ ನಮ್ಮ ಹೊಟ್ಟೆಪಾಡಿನ ಬಗ್ಗೆ ಮಾತನಾಡುತ್ತಾರೆ ಎಂದು ಗುಡುಗಿದರು
ದೇವೇಗೌಡರು ಪಕ್ಷ ಹೇಗೆ ಕಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ನನ್ನ ಬಿಡದಿ ತೋಟ ಮಾರಿ ಚುನಾವಣೆ ಮಾಡಲು ಹೋಗಿದ್ದೆ. ಬಡ್ಡಿ ವ್ಯವಹಾರ ಮಾಡುವವರಿಂದ ಹಣ ತಂದು ಚುನಾವಣೆ ಮಾಡಿದ್ದೇವೆ. ನಾವು ಬೇರೆ ಹಾದಿಯಿಂದ ಹಣ ಸಂಪಾದಿಸಿಲ್ಲ.
2018ರಲ್ಲಿ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರದಲ್ಲೂ ಬಹಳ ಅಂತರದಿಂದ ಗೆಲ್ಲಿಸಿ ಇತಿಹಾಸ ನಿರ್ಮಿಸಿದ್ದು ಮಂಡ್ಯ ಜನ. ಅಂದು ನಿಮ್ಮ ಆಶೀರ್ವಾದದಿಂದ ಕಾಂಗ್ರೆಸ್ ಜತೆ ಸರಕಾರ ಮಾಡಿದೆ. ಮೊದಲ ಬಜೆಟ್ ಮಂಡಿಸಲು ಅವಕಾಶ ಕೊಡಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.
ಇವತ್ತು ಗ್ಯಾರಂಟಿ ಗ್ಯಾರಂಟಿ ಅಂತಾರೆ. ಫ್ರೀ ಕರೆಂಟ್ ಅಂತಾರೆ.
ಅದರಲ್ಲಿ ದೊಡ್ಡ ಸಮಸ್ಯೆ ಇದೆ. ಗ್ಯಾರಂಟಿ ಯೋಜನೆ ಅನ್ನೋದು ಬೋಗಸ್ ಎಂದು ಆರೋಪಿಸಿದರು.
ಮಂಡ್ಯ ಜಿಲ್ಲೆಯ ಜನತೆ ನಮಗೆ ಅನ್ಯಾಯ ಮಾಡಲಿಲ್ಲ, ರಾಜಕೀಯವಾಗಿ ನಮ್ಮಿಂದ ಸಣ್ಣಪುಟ್ಟ ತಪ್ಪುಗಳಾಗಿರಬಹುದು, ನಮ್ಮ ತಪ್ಪು ತಿದ್ದಿಕೊಳ್ಳಲು ಈ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ರಾಜಕಾರಣದಲ್ಲಿ ಟೀಕೆ ಪ್ರತಿ ಟೀಕೆಗಳು ಇರುತ್ತವೆ. ಸುಮಲತಾ ಅವರು ನಾವು ಪರಸ್ವರ ಟೀಕೆ ಟಿಪ್ಪಣಿ ಮಾಡಿಕೊಂಡಿದ್ದೇವೆ. ಅದು ಮುಗಿದ ಅಧ್ಯಾಯ. ಅದು ಸಂಬಂಧಗಳಿಗೆ ಧಕೆ ತರುವಂಥದ್ದು ಬೇಡ. ಸುಮಲತಾ ಅವರು ನನ್ನ ಸ್ವಂತ ಅಕ್ಕ ಇದ್ದಂತೆ ಎಂದು ಹೆಚ್ ಡಿ ಕೆ ಹೇಳಿದರು.
ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಾಸಕ ಹೆಚ್.ಟಿ.ಮಂಜುನಾಥ್, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶಗೌಡ, ಡಾ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಪಕ್ಷದ ಜಿಲ್ಲಾಧ್ಯಕ್ಷ ರಮೇಶ್, ರಾಮಚಂದ್ರು, ಗುರುಚರಣ್, ಶಿವಕುಮಾರ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.