ಮಂಡ್ಯ: ರಾಜ್ಯದಲ್ಲಿರುವುದು ಹೆಬ್ಬೆಟ್ಟು ಗೃಹ ಸಚಿವರು,ಅದಕ್ಕೆ ತಮ್ಮ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎನ್ನುವುದು ಅವರಿಗೇ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಮಂಡ್ಯದಲ್ಲಿ ದಿಶಾ ಸಭೆಗೆಯಲ್ಲಿ ಭಾಗವಹಿಸುವ ಮೊದಲು ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಭೇಟಿ ಮಾಡಲು ಪೊಲೀಸ್ ಸ್ಟೇಷನ್‌ಗೆ ಬಂದ ಬಿಜೆಪಿ ನಾಯಕರಿಗೆ ಕೂತು ಮಾತನಾಡಲು ಅವಕಾಶ ಕೊಟ್ಟರು ಎಂದು ಪೊಲೀಸ್ ಅಧಿಕಾರಿಯನ್ನೆ ರಾಜ್ಯ ಸರಕಾರ ಸಸ್ಪೆಂಡ್ ಮಾಡಿದೆ. ಆದರೆ, ಸಿ.ಟಿ.ರವಿ ತಲೆ ಒಡೆದು ರಕ್ತ ಬರುವಂತೆ ಮಾಡಿದವರ ವಿರುದ್ಧ ಕ್ರಮ ಯಾಕಿಲ್ಲ ಎಂದು ಪ್ರಶ್ನಿಸಿದರು.
ಗೃಹ ಸಚಿವರಿಗೆ ಅವರ ಇಲಾಖೆಯಲ್ಲಿ ಏನು ನಡೆಯುತ್ತಿದೆ ಗೊತ್ತಿಲ್ಲ, ಕಳೆದ ಎರಡು ದಿನಗಳಿಂದ ಬರುತ್ತಿರುವ ಚಿನ್ನ ದೋಖಾ ಕೇಸುಗಳ ವಿರುದ್ಧ ಗೃಹ ಇಲಾಖೆಯ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನೆ ಮಾಡಿದರು.
ಬೆಳಗಾವಿಯಲ್ಲಿ ಜನರ ತೆರಿಗೆ ದುಡ್ಡಿನಲ್ಲಿ ನಕಲಿ ಗಾಂಧಿಗಳ ವಿಜೃಂಭಣೆ ನಡೆಯುತ್ತಿದೆ ಎಂದು ಇದೇ ವೇಳೆ ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ಕಾಂಗ್ರೆಸ್‌ನಿಂದ ಗಾಂಧಿ ಶತಮಾನೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಮುಂದಿನ ವರ್ಷ ಗಾಂಧಿ ಹೆಸರಲ್ಲಿ ಕಾರ್ಯಕ್ರಮ ಮಾಡಲು ಸರಕಾರ ಹೊರಟಿದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಗಾಂಧೀಜಿ ಶತಮಾನೋತ್ಸವ ಕಾರ್ಯಕ್ರಮ ಮಾಡುತ್ತಿದೆ ಸರಕಾರ. ಆದರೆ ಅಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕಟೌಟ್‌ಗಳಲ್ಲಿ ಗಾಂಧೀಜಿ ಫೋಟೋ ಕಾಣುತ್ತಿಲ್ಲ ನಕಲಿ ಗಾಂಧಿಗಳ ಫೋಟೋಗಳು ಇರುವ ಕಟೌಟ್‌ಗಳನ್ನು ಆಕಾಶದೆತ್ತರಕ್ಕೆ ಹಾಕಿದ್ದಾರೆ ಎಂದು ಟೀಕಿಸಿದರು.
ಸ್ವಾತಂತ್ರ್ಯ ಬಂದ ಕೂಡಲೇ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಿ ಎಂದು ಸ್ವತಃ ಗಾಂಧೀಜಿ ಹೇಳಿದ್ದರು, ಅವರ ಕಾಂಗ್ರೆಸ್ ಈಗಿಲ್ಲ. ಈಗ ಇರುವುದು ಆಲಿಬಾಬ ಮತ್ತು 40 ಮಂದಿ ಕಳ್ಳರ ಕಾಂಗ್ರೆಸ್ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಸರಕಾರ ಪ್ರತಿದಿನವೂ ಗ್ಯಾರಂಟಿ ಗ್ಯಾರಂಟಿ ಎನ್ನುತ್ತಿದೆ. ಜನರಿಗೆ ಇನ್ನೂ ಎರಡು ಸಾವಿರ ರೂಪಾಯಿ ಕೊಡಲಿ, ನಮ್ಮ ಅಭ್ಯಂತವಿಲ್ಲ. ಆದರೆ, ಮಿತಿ ಮೀರಿದ ತೆರಿಗೆ ಹೇರಿಕೆ ಮಾಡುತ್ತಿದ್ದಾರೆ ಎಂದು ಹೆಚ್ ಡಿ ಕೆ ಅಸಮಾಧಾನ ವ್ಯಕ್ತಪಡಿಸಿದರು.
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ವಾಹನ ಪ್ರಪಾತಕ್ಕೆ ಉರುಳಿ ರಾಜ್ಯದ ಮೂವರು ಯೋಧರು ಹುತಾತ್ಮರಾಗಿವುದಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಇದೇ ವೇಳೆ ತೀವ್ರ ವ್ಯಕ್ತಪಡಿಸಿದರು.