ನವದೆಹಲಿ: 2070ರ ವೇಳೆಗೆ ಭಾರತದ ಉಕ್ಕು ವಲಯದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ತರುವ ಗುರಿ ಇದ್ದು, ಪ್ರಧಾನಿ ನರೇಂದ್ರ ಮೋದಿ ಅವರ ದೃಢ ನಾಯಕತ್ವದಲ್ಲಿ ಪ್ರಾಮಾಣಿಕತೆ, ಜವಾಬ್ದಾರಿ ಮತ್ತು ಅಚಲ ಸಂಕಲ್ಪದೊಂದಿಗೆ ಈ ರಾಷ್ಟ್ರೀಯ ಧ್ಯೇಯವನ್ನು ಮುನ್ನಡೆಸಲು ನಾನು ಸಮರ್ಪಿತನಾಗಿದ್ದೇನೆ ಎಂದು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು,ಹುಟ್ಟುಹಬ್ಬದ ಶುಭಾಶಯ ಕೋರಿ ನಿರಂತರವಾಗಿ ನನಗೆ ಮಾರ್ಗದರ್ಶನ ಮಾಡುತ್ತಿರುವ ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಾನು ಹೃದಯಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಸಂದರ್ಭದಲ್ಲಿ ನಾನು ಪ್ರಧಾನಿಗಳನ್ನು ಸಂಸತ್ ಭವನದ ಅವರ ಕಚೇರಿಯಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡೆ ಹಾಗೂ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವಾಲಯಗಳ ವ್ಯಾಪ್ತಿಯಲ್ಲಿ ಆಗಿರುವ ಗುರುತರ ಅಭಿವೃದ್ಧಿ ಹಾಗೂ ಪ್ರಗತಿಯ ಬಗ್ಗೆ ವಿವರಿಸಿದೆ ಎಂದರು.
ಪ್ರಧಾನಮಂತ್ರಿಗಳು ನಮ್ಮ ಪ್ರಯತ್ನಗಳು ಹಾಗೂ ಕಾರ್ಯಚಟುವಟಿಕೆ ಮತ್ತು ಫಲಿತಾಂಶಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು, ಇದು ನನಗೆ ಮತ್ತು ನನ್ನ ಇಡೀ ತಂಡಕ್ಕೆ ಅಪಾರ ಪ್ರೋತ್ಸಾಹದ ಶಕ್ತಿಯಾಗಿದೆ ಎಂದು ಭಾವಿಸುತ್ತೇನೆ. ಪ್ರಧಾನಿಗಳ ದೂರದೃಷ್ಟಿಯ ನಾಯಕತ್ವದಲ್ಲಿ ನಾವು ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆಯನ್ನು (RINL) ಪುನರುಜ್ಜೀವನಗೊಳಿಸುವ ಕಡೆಗೆ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಬೊಕಾರೊ ಮತ್ತು ರೂರ್ಕೆಲಾದಂತಹ ಪ್ರಮುಖ ಉಕ್ಕಿನ ಸ್ಥಾವರಗಳಲ್ಲಿ ಬೃಹತ್ ಪ್ರಮಾಣದ ವಿಸ್ತರಣೆ ಮತ್ತು ಆಧುನೀಕರಣವನ್ನು ಪ್ರಾರಂಭಿಸಿದ್ದೇವೆ ಹಾಗೂ ಪ್ರಧಾನಿಗಳ ಕನಸಿನ ಆತ್ಮನಿರ್ಭರ ಭಾರತ ಸಾಕಾರದ ಭಾಗವಾಗಿ ಭೂಮಿಯಲ್ಲಿನ ಅಪರೂಪದ ಶಾಶ್ವತ ಅಯಸ್ಕಾಂತಗಳ ಬಳಕೆ ಯೋಜನೆ ಜಾರಿಗೆ ತಂದಿದ್ದೇವೆ. ಇದು ಅತ್ಯಂತ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ ಎಂದರು.
2047ಕ್ಕೆ ವಿಕಸಿತ ಭಾರತ ಸಾಧನೆ ಸಂಕಲ್ಪ ತೊಟ್ಟಿರುವ ಮಾನ್ಯ ಪ್ರಧಾನಮಂತ್ರಿಗಳ ಪರಿವರ್ತನಾತ್ಮಕ ದೃಷ್ಟಿಕೋನದಿಂದ ನಾವು ಪ್ರೇರಣೆ ಪಡೆದಿದ್ದೇವೆ. 2070ರ ವೇಳೆಗೆ ಭಾರತದ ಉಕ್ಕು ವಲಯದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ತರುವ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಪ್ರಧಾನಿಗಳ ದೃಢ ನಾಯಕತ್ವದಲ್ಲಿ ಪ್ರಾಮಾಣಿಕತೆ, ಜವಾಬ್ದಾರಿ ಮತ್ತು ಅಚಲ ಸಂಕಲ್ಪದೊಂದಿಗೆ ಈ ರಾಷ್ಟ್ರೀಯ ಧ್ಯೇಯವನ್ನು ಮುನ್ನಡೆಸಲು ನಾನು ಸಮರ್ಪಿತನಾಗಿದ್ದೇನೆ ಎಂದು ತಿಳಿಸಿದ್ದಾರೆ.

